ಬೆಂಗಳೂರು: ಉಪಚುನಾವಣೆ ಸೋಲುವ ಭಯದಿಂದ ಬಿಜೆಪಿ-ಜೆಡಿಎಸ್ ವಕ್ಫ್ ವಿವಾದವನ್ನ ಮಾಡುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಎಂ.ಬಿ.ಪಾಟೀಲ್ ಅವರು ಎಲ್ಲಾ ವಿವರಣೆ ಕೊಟ್ಡಿದ್ದಾರೆ. ಯಾರು ಬೇಕಾದರೂ ಇದು ನಮ್ಮ ಆಸ್ತಿ ಕ್ಲೈಮ್ ಮಾಡಬಹುದು. ಆದರೆ ಅದಕ್ಕೆ ಬೇಕಾಗಿರೋದು ದಾಖಲಾತಿ. ದಾಖಲಾತಿ ಇದ್ದರೆ ಏನು ತೊಂದರೆ ಇಲ್ಲ ಅಂತಾ ನಿನ್ನೆ ಸಚಿವರು ಹೇಳಿದ್ದಾರೆ. ವಕ್ಫ್ ಅದಾಲತ್ ಆದಾಗ ನಮ್ಮ ಜಾಗ ಅಂತಾ ಕೆಲವರು ಹೇಳಿದ್ದಾರೆ. ಆದರೆ ಅದಕ್ಕೆ ಯಾರು ಆತಂಕ ಪಡೋ ಅಗತ್ಯ ಇಲ್ಲ. ಈಗಾಗಲೇ ಸರ್ಕಾರ ಇದರ ಬಗ್ಗೆ ಸ್ಪಷ್ಟನೆ ಕೊಟ್ಟಿದೆ. ರೈತರ ಜಾಗ ಸರ್ಕಾರ ವಾಪಸ್ ಪಡೆಯೊಲ್ಲ. ಯಾರೂ ಆತಂಕ ಪಡೋ ಅಗತ್ಯ ಇಲ್ಲ ಎಂದರು.
ಬಿಜೆಪಿ-ಜೆಡಿಎಸ್ ಅವರು ರಾಜಕೀಯ ಮಾಡೋಕೆ ಮಾಡ್ತಿದ್ದಾರೆ. ಯಾವುದು ದಾಖಲಾತಿ ಇರುತ್ತೋ ಆ ಆಸ್ತಿ ರೈತರಿಗೆ ಇರುತ್ತೆ. ಆದರು ಬಿಜೆಪಿ-ಜೆಡಿಎಸ್ ಅವರು ವಿವಾದ ಮಾಡ್ತಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ಗೆ ಸೋಲುವ ಭೀತಿ ಇದೆ. ಹೀಗಾಗಿ ವಿವಾದ ಮಾಡ್ತಿದ್ದಾರೆ. ಹಿಂದೂ-ಮುಸ್ಲಿಂ ಅಂತಾ ಮಾಡಿದ್ರೆ ಗೆಲ್ಲಬಹುದು ಅನ್ನೋದು ಇವರ ಪ್ಲ್ಯಾನ್ ಎಂದು ಬಿಜೆಪಿ-ಜೆಡಿಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಕಿಡಿಕಾರಿದರು.