ಬೆಂಗಳೂರು: ಈ ಮೈತ್ರಿಯು ತಾತ್ಕಾಲಿಕವಲ್ಲ ಎಂದು ಹೇಳಿರುವ ಹೆಚ್.ಡಿ. ಕುಮಾರಸ್ವಾಮಿ, ಬಿಜೆಪಿ-ಜೆಡಿಎಸ್ ಮೈತ್ರಿ ಮುಂದುವರಿಯಲಿದೆ. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವು ಅಸಾಧ್ಯ ಎಂದರು.
ಬೆಂಗಳೂರಿನಲ್ಲಿ ಮಾತನಾಡಿದ ಕುಮಾರಸ್ವಾಮಿ, ಮೂರನೇ ಬಾರಿ ಕೇಂದ್ರದಲ್ಲಿ ಸರ್ಕಾರ ರಚನೆ ಮಾಡುವುದು ಎಷ್ಟು ಸತ್ಯವೋ, ಸೂರ್ಯ ಚಂದ್ರ ಹುಟ್ಟುವುದು ಅಷ್ಟೇ ಸತ್ಯ. ಬೂತ್ ಮಟ್ಟ, ಜಿಲ್ಲಾ ಮಟ್ಟದಲ್ಲಿ ಪರಸ್ಪರ ಸಂಶಯಕ್ಕೆ ಒಳಗಾಗದೇ ಕೆಲಸ ಮಾಡಬೇಕು. ಮೈತ್ರಿ ನಾಯಕರು ಭದ್ರ ಬುನಾದಿ ಹಾಕಿದರೆ ಕಾಂಗ್ರೆಸ್ ಬರಲು ಸಾಧ್ಯವಿಲ್ಲ ಎಂದರು.
ಮೈತ್ರಿಯಿಂದಾಗಿ ಕಾಂಗ್ರೆಸ್ ಗೆ ಅಂದೇ ಭಯ ಶುರುವಾಗಿದೆ. ಇದು ತಾತ್ಕಾಲಿಕ ಮೈತ್ರಿ ಅಲ್ಲ, ಇನ್ನೂ ಮುಂದೆ ಮೈತ್ರಿಯನ್ನು ಮುಂದುವರಿಸಿಕೊಂಡು ಹೋಗಬೇಕು. ಇದು ರಾಜ್ಯದ ಅಭಿವೃದ್ಧಿ ಮೈತ್ರಿಯಾಗಿದೆ. ನನ್ನ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕನಿಷ್ಟ 25 ಸಾವಿರ ಮತಗಳ ಲೀಡ್ ಕೊಡಿಸುತ್ತೇನೆ ಎಂದರು.