ದೇಶದ ಸಾಮಾಜಿಕ ಸಾಮರಸ್ಯ ತೊಡೆದು ಹಾಕಲು ಬಿಜೆಪಿ, ಅದರ ಪ್ರಾಯೋಜಿತ ಸಂಘಟನೆಗಳಿಂದ ಪ್ರಯತ್ನ: ಡಿ.ಕೆ.ಶಿವಕುಮಾರ್

Prasthutha|

ಬೆಂಗಳೂರು: ನಮ್ಮ ಹಿರಿಯರು ಕಂಡಿದ್ದ ಸಾಮಾಜಿಕ ಸಾಮರಸ್ಯ ತೊಡೆದು ಹಾಕಲು ಆಡಳಿತಾರೂಢ ಪಕ್ಷ ಹಾಗೂ ಅವರ ಪ್ರಾಯೋಜಿತ ಸಂಘಟನೆಗಳು ಪ್ರಯತ್ನಿಸುತ್ತಿವೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಪ್ರತಿಯೊಬ್ಬ ಕಾಂಗ್ರೆಸಿಗ ಸ್ವಾತಂತ್ರ್ಯದ ರಕ್ಷಣೆಯ ಸಂಕಲ್ಪ ಮಾಡಬೇಕು. ನಮ್ಮ ನಾಯಕರು ಹೋರಾಟ ಮಾಡಿ ತಂದಿರುವ ಸ್ವಾತಂತ್ರ್ಯ ರಕ್ಷಣೆ ಮಾಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಹಮ್ಮಿಕೊಂಡಿದ್ದ 75 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

- Advertisement -

ಧರ್ಮ ಧರ್ಮಗಳ ನಡುವೆ, ಜಾತಿ ಜಾತಿಗಳ ನಡುವೆ ವೈಷಮ್ಯ ಹುಟ್ಟುಹಾಕಿ ಸಾಮಾಜಿಕ ಸಾಮರಸ್ಯ ಕದಡುವ ಸಂಘಟನೆಗಳ ವಿರುದ್ಧ ಹೋರಾಡುವ ಮೂಲಕ ಸ್ವಾತಂತ್ರ್ಯ ಕಾಪಾಡಬೇಕು. ಸ್ವಾತಂತ್ರ್ಯ ಹೋರಾಟಗಾರರ ಪರಂಪರೆ ಎತ್ತಿ ಹಿಡಿದು, ಯುವ ಪೀಳಿಗೆಗೆ ತಿಳಿಸಬೇಕು ಎಂದು ಅವರು ಹೇಳಿದರು.
ಇಂದು ಭಾರತ ಮಾತೆ ಬ್ರಿಟೀಷರ ಆಳ್ವಿಕೆಯಿಂದ ಬಿಡುಗಡೆಗೊಂಡ ಸುದಿನ. ಈ ಅಮೃತ ಗಳಿಗೆಗೆ ಈಗ 75 ವರ್ಷ ವರ್ಷ ತುಂಬಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ನಮ್ಮದೇ ಆದ ಸಂವಿಧಾನವನ್ನು ನಾವು ಹೊಂದಿದ್ದೇವೆ. ನಮ್ಮ ತ್ರಿವರ್ಣ ಧ್ವಜದಲ್ಲಿ ಕೇಸರಿ ಬಣ್ಣ ಧೈರ್ಯ, ತ್ಯಾಗದ ಸಂಕೇತವಾದರೆ, ಬಿಳಿ ಬಣ್ಣ ನಂಬಿಕೆ ಹಾಗೂ ಶಾಂತಿಯ ಸಂದೇಶ ಸಾರುತ್ತದೆ. ಹಸಿರು ಬಣ್ಣ ಸಮೃದ್ಧಿಯ ಸಂಕೇತವಾಗಿದೆ. ಈ ತ್ರಿವರ್ಣ ಧ್ವಜ ನಮ್ಮ ಹೆಮ್ಮೆ. ಈ ತ್ರಿವರ್ಣ ಧ್ವಜವನ್ನು ಕೆಂಪುಕೋಟೆಯಿಂದ ಹಳ್ಳಿ ಹಳ್ಳಿಯಲ್ಲಿ ಹಾರಿಸಿ ಆಚರಣೆ ಮಾಡುತ್ತಿದ್ದೇವೆ ಎಂದು ಶಿವಕುಮಾರ್ ಹೇಳಿದರು.

ಸ್ವಾತಂತ್ರ್ಯ ಹೋರಾಟಗಾರರ ಆದರ್ಶ ಅಳವಡಿಸಿಕೊಂಡು ಈ ಸ್ವಾತಂತ್ರ್ಯ ಕಾಪಾಡಿಕೊಳ್ಳ ಬೇಕಾಗಿರುವುದು ನಮ್ಮ ಕರ್ತವ್ಯ. 1790ರ ದಶಕದಲ್ಲಿ ಶಿವಮೊಗ್ಗದ ಚನ್ನಾಗಿರಿಯ ಧೋಂಡಿಯಾ ವಾಘ್ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದ. ಹೈದರ್ ಅಲಿ ಮತ್ತು ಟಿಪ್ಪು ಕೂಡ ಬ್ರಿಟೀಷರ ವಿರುದ್ಧ ಹೋರಾಡಿ ಆಂಗ್ಲೋ ಮೈಸೂರು ಯುದ್ಧ ಮಾಡಿದ್ದರು. ಈ ಇತಿಹಾಸ ತಿರುಚಲು ಸಾಧ್ಯವಿಲ್ಲ. 1824ರಲ್ಲಿ ಕಿತ್ತೂರು ರಾಣಿ ಚೆನ್ನಮ್ಮ, 1830ರ ಸಮಯದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಟೀಷರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. 1841 ರಲ್ಲಿ ಬಾದಾಮಿ ಬಂಡಾಯದಲ್ಲಿ ನರಸಿಂಗ ದತ್ತಾತ್ರೇಯ ಪೆಟ್ಕರ್ 1957-58 ರಲ್ಲಿ ಸುರಪುರ ವೆಂಕಟಪ್ಪ ನಾಯಕ ಬ್ರಿಟೀಷರ ವಿರುದ್ಧ ಹೋರಾಟ ಮಾಡಿದ್ದರು. ಹೀಗೆ ದೇಶದೆಲ್ಲೆಡೆ ಒಂದೊಂದೇ ಬಂಡಾಯ ಧ್ವನಿ ಏಳುತ್ತಿದ್ದ ಸಮಯದಲ್ಲಿ 1885 ರಲ್ಲಿ ಕಾಂಗ್ರೆಸ್ ರಚನೆ ಆಯಿತು. ಆರಂಭದ ದಿನಗಳಲ್ಲಿ ದಾದಾಬಾಯಿ ನವರೋಜಿ, ಸುರೇಂದ್ರನಾಥ್ ಬ್ಯಾನರ್ಜಿ, ಎ ಓ ಹ್ಯೂಮ್ ಅವರ ನೇತೃತ್ವದಲ್ಲಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ದೇಶದಾದ್ಯಂತ ಸಂಘಟಿಸಲು ಆರಂಭಿಸಿತು ಎಂದು ಶಿವಕುಮಾರ್ ಹೇಳಿದರು.

20ನೇ ಶತಮಾನದಲ್ಲಿ ಬಾಲ ಗಂಗಾಧರ ತಿಲಕ, ಲಾಲಾ ಲಜಪತ ರಾಯ್, ಬಿಪಿನ್ ಚಂದ್ರ ಪಾಲ್ ಸ್ವದೇಶಿ ಚಳುವಳಿ ಆರಂಭಿಸಿದರು. ತಿಲಕರು ಸ್ವರಾಜ್ಯ ನಮ್ಮ ಜನ್ಮಸಿದ್ಧ ಹಕ್ಕು ಎಂಬ ಆಗ್ರಹ ದೇಶದಲ್ಲಿ ಸ್ವಾತಂತ್ರ್ಯ ಹೋರಾಟದ ಕಿಚ್ಚು ಹಚ್ಚಿತ್ತು. ದಕ್ಷಿಣ ಆಫ್ರಿಕಾದಲ್ಲಿ ವರ್ಣಬೇಧ ನೀತಿ ವಿರುದ್ಧ ಸತ್ಯಾಗ್ರಹದ ಹೋರಾಟ ಮಾಡಿದ್ದ ಗಾಂಧೀಜಿ ಅವರನ್ನು ಭಾರತದ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿಕೊಳ್ಳುವಂತೆ ಮನವಿ ಮಾಡಲಾಯಿತು. ನಂತರ ಮಹಾತ್ಮ ಗಾಂಧೀಜಿ ಅವರು ಕಾಂಗ್ರೆಸ್ ನೇತೃತ್ವ ವಹಿಸಿ ಇಡೀ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ಆಯಾಮ ಕೊಟ್ಟರು. ಗಾಂಧೀಜಿ ಅವರು ಕರ್ನಾಟಕದ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಅಧ್ಯಕ್ಷತೆ ವಹಿಸಿದ್ದರು ಎಂದು ಅವರು ಹೇಳಿದರು.
ಸ್ವಾತಂತ್ರ್ಯ ಪಡೆಯಲು ಈ ಮಹನೀಯರು ತ್ಯಾಗ ಬಲಿದಾನ ಮಾಡಿದ್ದಾರೆ.

ನಾವೆಲ್ಲರೂ ಇವರ ಹೋರಾಟ ಗೌರವಿಸಿ ಸ್ಮರಿಸೋಣ. ಕಾಂಗ್ರೆಸ್ ಸಾಮಾಜಿಕ ನ್ಯಾಯ ದೊರಕಿಸಲು, ಶೋಷಿತರಿಗೆ ಸಿಗಬೇಕಾದ ಹಕ್ಕು ಕೊಡಿಸಲು ಸರ್ವರಿಗೂ ಸಮ ಹಕ್ಕು ನೀಡಿ ಕೋಮು ಸಾಮರಸ್ಯದ ಭಾರತ ಕಾಂಗ್ರೆಸ್ ನ ಕನಸಾಗಿದೆ. ಸಂವಿಧಾನದ ಅಡಿಯಲ್ಲಿ ಎಲ್ಲಾ ಜಾತಿ, ಧರ್ಮಗಳಿಗೂ ಅವಕಾಶ ಇರಬೇಕು ಎಂದು ನೆಹರೂ ಅವರು ಶ್ರಮಿಸಿದರು. ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂವಿಧಾನ ಕರಡು ಸಮಿತಿಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದರು. ನೆಹರೂ ಅವರ ಸಾಮಾಜಿಕ ನ್ಯಾಯ ಪರಿಕಲ್ಪನೆ ಆಧಾರದ ಮೇಲೆ ಅಂಬೇಡ್ಕರ್ ಹಾಗೂ ಸಂವಿಧಾನ ರಚನಾ ಸಮಿತಿ ಚರ್ಚಿಸಿ ರಚಿಸಿದ್ದನ್ನು ಯಾರೂ ಮರೆಯಲು ಸಾಧ್ಯವಿಲ್ಲ ಎಂದು ಶಿವಕುಮಾರ್ ಹೇಳಿದರು.

ದೇಶದಲ್ಲಿ ಸ್ತ್ರೀಯರ ಅಸಮಾನತೆ, ಶೋಷಣೆ, ಜಾತಿ ಅಸಮಾನತೆ, ನಿರುದ್ಯೋಗ, ಆರ್ಥಿಕ ಸಮಸ್ಯೆ, ಬೆಲೆ ಏರಿಕೆಯಂತಹ ಗಂಭೀರ ಸಮಸ್ಯೆಗಳನ್ನು ದೇಶ ಎದುರಿಸುತ್ತಿದ್ದು, ಇವುಗಳಿಗೆ ಪರಿಹಾರ ತಂದು, ಎಲ್ಲರಿಗೂ ಶಿಕ್ಷಣ ಸಿಗುವಂತೆ ಮಾಡಿ ಸಾಮಾಜಿಕ ಪ್ರಗತಿ ಸಾಧಿಸಬೇಕು.
ಇಂದು ನಾವೆಲ್ಲ ಸ್ವಾತಂತ್ರ್ಯ ನಡಿಗೆ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಮ್ಮ ಕರೆಗೆ ಓಗೊಟ್ಟು 1 ಲಕ್ಷಕ್ಕೂ ಹೆಚ್ಚು ಮಂದಿ ಆನ್ ಲೈನ್ ಮೂಲಕ ನೋಂದಣಿ ಮಾಡಿಕೊಂಡು ದಾಖಲೆ ನಿರ್ಮಿಸಿದ್ದಾರೆ.

ಭಾರತ ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶ. ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯಲು ನಾವು ರಾಷ್ಟ್ರಧ್ವಜ ಹಿಡಿದು ಹೆಜ್ಜೆ ಹಾಕಬೇಕಿದೆ. ಈ ದೇಶದ ಐಕ್ಯತೆ, ಸಮಗ್ರತೆ ಹಾಗೂ ಶಾಂತಿ ಕಾಪಾಡುವುದು ನಮ್ಮ ಕರ್ತವ್ಯ. ಹೀಗಾಗಿ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಪಕ್ಷ, ಜಾತಿ, ಧರ್ಮ ವ್ಯತ್ಯಾಸ ಮರೆತು ಹೆಜ್ಜೆ ಹಾಕೋಣ.

ಈ ಕಾರ್ಯಕ್ರಮ ಸಮಯದಲ್ಲಿ ರಾಷ್ಟ್ರಧ್ವಜ ಕೆಳಗೆ ಬಿದ್ದಿದ್ದರೆ ಅದನ್ನು ಎತ್ತಿಕೊಂಡು ಗೌರವ ಸಲ್ಲಿಸಬೇಕು. ರಾಷ್ಟ್ರಧ್ವಜಕ್ಕೆ ಅಪಮಾನ ಆಗದಂತೆ ನೋಡಿಕೊಳ್ಳಬೇಕು ಎಂದು ಸೇವಾದಳ ಹಾಗೂ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮನವಿ ಮಾಡುತ್ತೇನೆ ಎಂದು ಅವರು ಹೇಳಿದರು.
ವಿಧಾಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ ಕೆ ಹರಿಪ್ರಸಾದ್, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ್ ಖಂಡ್ರೆ, ಸಲೀಮ್ ಅಹ್ಮದ್, ಧ್ರುವನಾರಾಯಣ್, ಗೋವಾ, ಪುದುಚೇರಿ, ತಮಿಳುನಾಡು ರಾಜ್ಯ ಕಾಂಗ್ರಸ್ ಉಸ್ತುವಾರಿ ದಿನೇಶ್ ಗುಂಡೂರಾವ್, ಹಿರಿಯ ಮುಖಂಡ ಎಸ್ ಆರ್ ಪಾಟೀಲ್, ಮಾಜಿ ಕೇಂದ್ರ ಸಚಿವರಾದ ವೀರಪ್ಪ ಮೊಯ್ಲಿ ಮತ್ತಿತರರು ಭಾಗವಹಿಸಿದ್ದರು.

- Advertisement -