ಮಂಗಳೂರು: ವಿರೋಧ ಪಕ್ಷಕ್ಕೆ ಅವಕಾಶ ಎಲ್ಲಿದೆ ಎಂದು ಪ್ರಶ್ನಿಸುತ್ತಿದ್ದರು, ಆದರೆ ನಾವು ಅಧಿಕಾರಕ್ಕೆ ಹತ್ತಿರ ಬಂದಿದ್ದೇವೆ. ನಾವು ನೈತಿಕವಾಗಿ ಗೆದ್ದಿದ್ದೇವೆ, ಬಿಜೆಪಿ ನೈತಿಕವಾಗಿ ಸೋತಿದೆ. ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ಹರಸಾಹಸ ಮಾಡಬೇಕಾದ ಪರಿಸ್ಥಿತಿ ಬಂದಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಖರ್ಗೆ ಮತ್ತು ರಾಹುಲ್ ಗಾಂಧಿ ನೇತೃತ್ವದಲ್ಲಿ ಪ್ರಬಲ ಹೋರಾಟ ಮಾಡಿ ಉತ್ತಮ ಸಾಧನೆ ಮಾಡಿದೆ.ಇಂಡಿಯಾ ಒಕ್ಕೂಟವನ್ನು ಸೋಲಿಸಲು ಷಡ್ಯಂತ್ರ ಮಾಡಿದ್ದರು. ತನಿಖಾ ತಂಡಗಳನ್ನು ದುರ್ಬಳಕೆ ಮಾಡಿಕೊಂಡು ಬ್ಯಾಂಕ್ ಖಾತೆಗಳನ್ನು ತಡೆಹಿಡಿದು ಕಾಂಗ್ರೆಸ್ ಪಕ್ಷದ ಕೈಗಳನ್ನು ಕಟ್ಟಿಹಾಕಿದ್ದರು. ಆದರೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಜನರು ಹೋರಾಡಿ ಮೋದಿ ಸರ್ಕಾರಕ್ಕೆ ಪಾಠ ಕಲಿಸಿದ್ದಾರೆ. ಪ್ರತಿಕೂಲ ಪರಿಸ್ಥಿತಿಯಲ್ಲೂ ಕಾಂಗ್ರೆಸ್ ಉತ್ತಮ ಸಾಧನೆ ಮಾಡಿದೆ, ಅದಕ್ಕಾಗಿ ರಾಷ್ಟ್ರೀಯ ನಾಯಕರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರಜಾಪ್ರಭುತ್ವ, ಸಂವಿಧಾನ ಉಳಿಸುವ ಹೋರಾಟದಲ್ಲಿ ಜನರು ನಮ್ಮ ಜೊತೆ ನಿಂತಿದ್ದಾರೆ. ಕಾಂಗ್ರೆಸ್ ಪದ ನಿಂತವರು ಮತ್ತು ಮತ ಕೊಟ್ಟವರಿಗೆ ಧನ್ಯವಾದಗಳು ಎಂದು ಹೇಳಿದ್ದಾರೆ.
ದ.ಕ ಲೋಕಸಭಾ ಕ್ಷೇತ್ರದಲ್ಲಿ ಈ ಹಿಂದಿಗಿಂತ ಹೆಚ್ಚಿನ ಮತಗಳು ಬಂದಿವೆ, ಮತದಾರರಿಗೆ ಧನ್ಯವಾದಗಳು. ದ.ಕ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಕೆಲಸವನ್ನು ನಾವು ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ.