ಮಂಗಳೂರು: “ಬಿಜೆಪಿ ಎಂಎಲ್ಎ, ಎಂಪಿ ಅವರು ಸುರತ್ಕಲ್ ಟೋಲ್ ಗೇಟ್ ವಿಚಾರದಲ್ಲಿ ಮಾನಸಿಕ ಸ್ವಾಸ್ಥ್ಯ ಕಳೆದುಕೊಂಡಂತಿದೆ. ಅ.18ರ ಟೋಲ್ ಗೇಟ್ ಹೋರಾಟವನ್ನು ಹತ್ತಿಕ್ಕಲು ನನ್ನ ಮನೆಗೆ ಮಧ್ಯರಾತ್ರಿ ಪೊಲೀಸರನ್ನು ಕಳುಹಿಸಿ ನೋಟಿಸ್ ನೀಡಿರುವ ಜಿಲ್ಲಾಡಳಿತಕ್ಕೆ ನಾಚಿಕೆಯಾಗಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿರುವ ಅವರು, ನಾನೊಬ್ಬ ಸಾಮಾಜಿಕ ಕಾರ್ಯಕರ್ತೆಯೇ ಹೊರತು ಉಗ್ರಗಾಮಿ ಅಲ್ಲ. ನಾನೊಬ್ಬ ಭಾರತ ದೇಶದ ಜವಾಬ್ದಾರಿಯುತ ಪ್ರಜೆಯಾಗಿ ಈ ದೇಶದ ಕಾನೂನನ್ನು ಗೌರವಿಸುತ್ತೇನೆ ಎಂದು ಹೇಳಿದ್ದಾರೆ.
ನಿನ್ನೆ ಮಧ್ಯರಾತ್ರಿ ಸುರತ್ಕಲ್ ಠಾಣೆಯ 5 ಮಂದಿ ಪೊಲೀಸರು 11:45ಕ್ಕೆ ಕುಳಾಯಿಯಲ್ಲಿರುವ ನನ್ನ ಮನೆಗೆ ಬಂದಿರುವುದು ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಈ ಸಂದರ್ಭದಲ್ಲಿ ನನ್ನ ಮನೆಯಲ್ಲಿ 74 ವರ್ಷ ಪ್ರಾಯದ ನನ್ನ ಅತ್ತೆ ಇದ್ದು ಪೊಲೀಸರ ನಡವಳಿಕೆಯಿಂದ ಭಯಭೀತರಾಗಿದ್ದರು. ನಾನು ಮನೆಯಲ್ಲಿ ಇರದ ಕಾರಣ ನೋಟಿಸ್ ಪಡೆದುಕೊಂಡಿಲ್ಲ. ನನ್ನ ಪ್ರಶ್ನೆ ಏನೆಂದರೆ ಮಂಗಳೂರು ನಿಜಕ್ಕೂ ಸುರಕ್ಷಿತವೇ? ಮಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರೇ? ಮಹಿಳೆಯರು ಇರುವ ಮನೆಗೆ ಯಾರು ಬೇಕಾದರೂ ಮಧ್ಯರಾತ್ರಿ ಬಂದು ಬಾಗಿಲು ಬಡಿಯಬಹುದೇ? ಇದೆಂತಹಾ ಪ್ರಜಾಪ್ರಭುತ್ವ ಎಂದು ಪ್ರಶ್ನಿಸಿದ್ದಾರೆ.
ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯಲ್ಲಿ ಕಳೆದ ಏಳು ವರ್ಷಗಳಿಂದ ನಾನು ಹೋರಾಟಗಾರ್ತಿಯಾಗಿದ್ದು ನನ್ನ ಪಕ್ಷದ ಬಹುತೇಕ ಎಲ್ಲಾ ನಾಯಕರು ನನ್ನ ಜೊತೆ ಸಮಾನ ಉದ್ದೇಶದಿಂದ ಹೋರಾಟದಲ್ಲಿ ತೊಡಗಿಕೊಂಡಿದ್ದಾರೆ. ಹಿಂದಿನಿಂದಲೂ ಅವರೆಲ್ಲರೂ ನನ್ನ ನಡೆಯನ್ನು ಬೆಂಬಲಿಸಿಕೊಂಡೇ ಬರುತ್ತಿದ್ದು ಮುಂದೆಯೂ ನನ್ನ ಜೊತೆ ಅವರು ಇರಲಿದ್ದಾರೆ ಎಂದು ಹೇಳಿದರು.
ನಿನ್ನೆ ಮಧ್ಯರಾತ್ರಿ ನನ್ನ ಮನೆಗೆ ಟೋಲ್ ಹೋರಾಟ ಹತ್ತಿಕ್ಕುವ ನೆಪದಲ್ಲಿ ನೋಟಿಸ್ ನೀಡಲು ಪೊಲೀಸರು ಹೋಗಿದ್ದ ವೇಳೆಯೂ ನನ್ನ ಪಕ್ಷದ ನಾಯಕರು ತುರ್ತಾಗಿ ಸ್ಪಂದಿಸಿದ್ದಾರೆ. ಮಧ್ಯರಾತ್ರಿ ಹಾಗೂ ಸಹಜವಾಗಿ ನಿದ್ದೆಯಲ್ಲಿರುವ ಕಾರಣ ಕೆಲವರು ಸ್ಪಂದಿಸದೆ ಇರಬಹುದು. ಅವರು ಬೆಳಗ್ಗೆ ನನಗೆ ಕರೆ ಮಾಡಿ ಘಟನೆ ಬಗ್ಗೆ ವಿಚಾರಿಸಿದ್ದಾರೆ. ಆದರೆ ಈ ಬಗ್ಗೆ ಅರಿಯದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಸಂಸದ ನಳಿನ್ ಕುಮಾರ್ ಕಟೀಲ್ ಅವರ ನಿರುದ್ಯೋಗಿ ಚೇಲಾಗಳು ನಾನೇ ಹೇಳಿದಂತೆ ಪೋಸ್ಟ್ ಒಂದನ್ನು ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಾರೆ. ಇದಕ್ಕೆ ನಾನು ಅಥವಾ ನನ್ನ ಪಕ್ಷದ ನಾಯಕರು, ಕಾರ್ಯಕರ್ತರು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೋರಾಟದ ಹಾದಿಯಲ್ಲಿ ಎದೆಗುಂದುವುದಿಲ್ಲ. ನನ್ನ ಪಕ್ಷದ ನಾಯಕರ ಬಗ್ಗೆ ನಾನೇ ಒಮ್ಮತದ ಅಭಿಪ್ರಾಯ ಹೊಂದಿರುವಾಗ ನನ್ನ ಹೆಸರಿನಲ್ಲಿ ನಾಯಕರ ವರ್ಚಸ್ಸು ಹಾಳು ಮಾಡುತ್ತಿರುವ ಷಂಡರಿಗೆ ದೇವರು ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.