ಕಾಂಗ್ರೆಸ್ ನಾಯಕನಿಗೆ ಖಾಯಂ ಕ್ಯಾಬಿನೆಟ್ ಸ್ಥಾನಮಾನ ನೀಡಿದ ಬಿಜೆಪಿ
Prasthutha: January 8, 2022

ಪಣಜಿ: ಗೋವಾ ಬಿಜೆಪಿ ಸರ್ಕಾರವು ಕಾಂಗ್ರೆಸ್ ಹಿರಿಯ ಶಾಸಕ ಪ್ರತಾಪ್ ಸಿಂಗ್ ರಾಣೆ ಅವರಿಗೆ ಖಾಯಂ ಸಚಿವ ಸಂಪುಟ ಸ್ಥಾನಮಾನವನ್ನು ನೀಡಿದೆ.
87 ವರ್ಷದ ರಾಣೆ ಅವರು ಗೋವಾದ ದೀರ್ಘಾವಧಿಯ ಮುಖ್ಯಮಂತ್ರಿಯಾಗಿದ್ದರು. ರಾಣೆ ಅವರು ಗೋವಾದಲ್ಲಿ ಶಾಸಕರಾಗಿ 50 ವರ್ಷಗಳನ್ನು ಪೂರ್ಣಗೊಳಿಸಿದ ನಾಯಕರಾಗಿದ್ದಾರೆ.
ಗೋವಾದ ಪೋರಿಯಂ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಪ್ರತಾಪ್ ಸಿಂಗ್ ರಾಣೆ ಅವರ ಮಗ ವಿಶ್ವಜಿತ್ ಬಿಜೆಪಿಯಲ್ಲಿದ್ದು, ಗೋವಾದ ಪ್ರಸ್ತುತ ಆರೋಗ್ಯ ಸಚಿವರಾಗಿದ್ದಾರೆ.
ರಾಣೆ ಅವರು ಹಲವಾರು ವರ್ಷಗಳಿಂದ ಸರ್ಕಾರದಲ್ಲಿ ಅನೇಕ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ರಾಜ್ಯ ವಿಧಾನಸಭೆಯ ಸ್ಪೀಕರ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.
ಅವರಿಗೆ ಖಾಯಂ ಕ್ಯಾಬಿನೆಟ್ ಸ್ಥಾನಮಾನ ನೀಡುವ ನಿರ್ಧಾರವನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಟ್ವಿಟರ್ ನಲ್ಲಿ ಘೋಷಿಸಿದ್ದಾರೆ. ರಾಜಕೀಯದಲ್ಲಿ 50 ವರ್ಷಗಳನ್ನು ಪೂರ್ಣಗೊಳಿಸಿದ ತಮ್ಮ ತಂದೆಯನ್ನು ಗೌರವಿಸಿದ ಗೋವಾ ಸರ್ಕಾರಕ್ಕೆ ತುಂಬಾ ಆಭಾರಿಯಾಗಿದ್ದೇನೆ ಎಂದು ವಿಶ್ವಜಿತ್ ಟ್ವೀಟ್ ಮಾಡಿದ್ದಾರೆ.
