ಬೆಂಗಳೂರು: ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗಳನ್ನು ಅರ್ಥೈಸಿಕೊಳ್ಳುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಂಗಳವಾರ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂ ಧರ್ಮ ಎಲ್ಲರನ್ನು ಒಗ್ಗೂಡಿಸಿ ಶಾಂತಿ, ನೆಮ್ಮದಿಯಿಂದ ಸಮಾಜದ ಎಲ್ಲ ವರ್ಗವನ್ನು ಮುನ್ನಡೆಸಿಕೊಂಡು ಹೋಗಬೇಕಾದ ಸಾರಾಂಶವನ್ನು ಹೊಂದಿದೆ. ಇದಕ್ಕೆ ವಿರುದ್ಧವಾಗಿ ಇರುವವರು ಹಿಂದುಗಳಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಆ ರೀತಿ ಯಾರು ಇರುತ್ತಾರೋ ಅವರಿಗೆ ಅನ್ವಯಿಸುತ್ತದೆ ಎಂಬರ್ಥದಲ್ಲಿ ಹೇಳಿದ್ದಾರೆ. ಬಿಜೆಪಿಯವರು ರಾಹುಲ್ ಗಾಂಧಿಯವರ ಭಾಷಣ ಅರ್ಥ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದರು.
ಕೇಂದ್ರದಿಂದ ಹೊಸ ಮೂರು ಅಪರಾಧ ಕಾನೂನು ಜಾರಿ ಕುರಿತು ಪ್ರತಿಕ್ರಿಯಿಸಿದ ಸಚಿವರು, ಹೊಸ ಕಾನೂನುಗಳು ಒಂದು ರಾಜ್ಯಕ್ಕೆ ಮಾತ್ರ ಸಂಬಂಧಪಟ್ಟಿದ್ದರೆ ವಾಪಸ್ ಪಡೆಯುವಂತೆ ಹೇಳಬಹುದಿತ್ತು. ಇದು ಇಡೀ ದೇಶಕ್ಕೆ ಸಂಬಂಧಿಸಿದ್ದು. ಹೊಸ ಕಾನೂನು ಅಡಿ ರಾಜ್ಯದಲ್ಲಿ 80 ಪ್ರಕರಣಗಳು, ಬೆಂಗಳೂರು ನಗರದಲ್ಲಿ 25ಕ್ಕೂ ಹೆಚ್ಚು ಪ್ರಕರಣಗಳು ನಿನ್ನೆ ದಾಖಲಾಗಿವೆ. ಮುಂದೆ ಲಕ್ಷಾಂತರ ಕೇಸ್ ಗಳು ದಾಖಲಾಗುತ್ತವೆ. ಇದೆಲ್ಲವನ್ನು ಹೊಸ ಕಾನೂನಿನ ಅಡಿ ದಾಖಲಿಸಬೇಕು. ಸಿಬ್ಬಂದಿಗಳಿಗೆ ತರಬೇತಿ ನೀಡಲಾಗಿದ್ದು ಕಲಿತುಕೊಳ್ಳುತ್ತಾರೆ ಎಂದರು.