Home ಟಾಪ್ ಸುದ್ದಿಗಳು ಬಿಟ್ ಕಾಯಿನ್ ಹಗರಣದಲ್ಲಿ ರಾಕೇಶ್ ಹೆಸರು ಎಳೆದು ತಂದ ಬಿಜೆಪಿ: ಸಿದ್ದರಾಮಯ್ಯ ಕಿಡಿ

ಬಿಟ್ ಕಾಯಿನ್ ಹಗರಣದಲ್ಲಿ ರಾಕೇಶ್ ಹೆಸರು ಎಳೆದು ತಂದ ಬಿಜೆಪಿ: ಸಿದ್ದರಾಮಯ್ಯ ಕಿಡಿ

ಬೆಂಗಳೂರು: ತಮ್ಮ ಭ್ರಷ್ಟಾಚಾರ ಮುಚ್ಚಿಹಾಕಲು ಬಿಜೆಪಿ ಕರ್ನಾಟಕ ಅಗಲಿ ಹೋಗಿರುವ ನನ್ನ ಮಗನ ಹೆಸರನ್ನು ಎಳೆದು ತಂದಿದೆ. ಸರಿ, ನಮ್ಮ ಸರ್ಕಾರದ ಅವಧಿಯನ್ನೂ ಸೇರಿಸಿ ಬಿಟ್ ಕಾಯಿನ್ ಹಗರಣವನ್ನು ಸುಪ್ರೀಮ್ ಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಒತ್ತಾಯಿಸುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ನನ್ನ ಮಗ ರಾಕೇಶ್ ನಮ್ಮನಗಲಿ ಐದು ವರ್ಷಗಳಾಗಿವೆ, ಪುತ್ರಶೋಕ ನಿರಂತರ. ತನ್ನ ಮೇಲಿನ ಆರೋಪಕ್ಕೆ ಆತ ಪ್ರತಿಕ್ರಿಯಿಸಲೂ ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ಬಿಜೆಪಿ ನನ್ನ ದಿವಂಗತ ಮಗನ ಹೆಸರನ್ನು ಎಳೆದು ರಾಜಕೀಯ ಮಾಡಲು ಹೊರಟಿರುವುದು “ಅತ್ಯಂತ ವೈಯಕ್ತಿಕ ಮತ್ತು ಕ್ಷುಲ್ಲಕತನದ’ ರಾಜಕಾರಣ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.


ರಾಕೇಶ್ ಜೊತೆಗೆ ಬಿಟ್ ಕಾಯಿನ್ ಹಗರಣದ ಆರೋಪಿ ಶ್ರೀಕೃಷ್ಣನ ಗೆಳೆಯ ಹೇಮಂತ್ ಮುದ್ದಪ್ಪ ಇದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ಹಾಗಿದ್ದರೆ 2018ರಲ್ಲಿ ದಾವೋಸ್ ನಲ್ಲಿ ನಡೆದ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜೊತೆಗಿರುವ ಬ್ಯಾಂಕ್ ಲೂಟಿಕೋರ ನೀರವ್ ಮೋದಿಯ ಪೋಟೊವನ್ನು ಹೇಗೆ ವ್ಯಾಖ್ಯಾನಿಸುವುದು?


ಶ್ರೀಕೃಷ್ಣನ ಜೊತೆ ಬಂಧನಕ್ಕೊಳಗಾದ ಹೇಮಂತ್ ಮುದ್ದಪ್ಪನ ಬಿಡುಗಡೆಗಾಗಿ ಪೊಲೀಸರ ಜೊತೆ ಬಿಜೆಪಿಯ ಪ್ರಮುಖ ನಾಯಕರೊಬ್ಬರು ಸಂಧಾನ ಮಾಡಿದ್ದು, ಆ ಸೇವೆಗಾಗಿ ಆರೋಪಿಯಿಂದ ಆ ಬಿಜೆಪಿ ನಾಯಕ ಬಿಟ್ ಕಾಯಿನ್ ಪಡೆದಿದ್ದ ಎಂಬ ಆರೋಪ ಇದೆ. ಆ ನಾಯಕ ಯಾರೆಂದು ನಳಿನ್ ಕುಮಾರ್ ಕಟೀಲ್ ಅವರಿಗೆ ಗೊತ್ತಿರಬಹುದೇನೋ? ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version