ಶಿವಮೊಗ್ಗ: ಆರೆಸ್ಸೆಸ್’ಗೆ ಬೈದರೆ ಮುಸ್ಲಿಮರ ಓಟು ನಮಗೆ ಬರುತ್ತದೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಜೆಡಿಎಸ್ ದಿನಗಳನ್ನು ಕಳೆಯುತ್ತಿವೆ. ಅವರು ಓಟು ಪಡೆಯಲಿ. ನಾವು ಬೇಡ ಎಂದು ಹೇಳುವುದಿಲ್ಲ. ಆದರೆ ಬಿಜೆಪಿ ಎಲ್ಲಿಯೂ ಮುಸ್ಲಿಮರ ಓಟನ್ನು ಅವಲಂಬಿಸಿಲ್ಲ. ಶಿವಮೊಗ್ಗದಲ್ಲಂತೂ ಬಿಕ್’ಕುಲ್ ಇಲ್ಲ. ಅವರ ಏರಿಯಾಕ್ಕೆ ಹೋಗಿ ನಾನು ಮತ ಕೇಳಿಲ್ಲ, ಇನ್ನು ಮುಂದೆಯೂ ಕೇಳುವುದಿಲ್ಲ. ಆದರೂ ಅವರೇ ಮತ ನೀಡುತ್ತಿದ್ದಾರೆ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರೆಸ್ಸೆಸ್’ಗೆ ಬೈದರೆ ಸತ್ತ ಮೇಲೆ ಸ್ವರ್ಗಕ್ಕೆ ಹೋಗಬಹುದು ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಅವರು ಸ್ವರ್ಗಕ್ಕೆ ಹೋಗಲಿ ಎಂಬುದು ನಮ್ಮೆಲ್ಲರ ಆಸೆ ಎಂದು ಲೇವಡಿ ಮಾಡಿದರು.
ಬಿಜೆಪಿ ಸರ್ಕಾರ ರಚನೆಗೆ ಆರೆಸ್ಸೆಸ್ ಕಮಿಷನ್ ರೂಪದಲ್ಲಿ ಹಣ ಸಂಗ್ರಹಿಸುತ್ತಿದೆ ಎಂದು ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಆರೆಸ್ಸೆಸ್ ಬೈಯೋದು ಸಿದ್ದರಾಮಯ್ಯ ಅವರ ಕೆಟ್ಟ ಚಾಳಿ ಇದೀಗ ಕುಮಾರಸ್ವಾಮಿ ಅವರಿಗೂ ಬಂದಿದೆ. ಬೈಯ್ಯದಿದ್ದರೆ ತಿಂದ ಅನ್ನ ಕರಗುವುದಿಲ್ಲ ಎಂದು ಕುಟುಕಿದರು.
ಬೇರೆ ಪಕ್ಷಗಳಲ್ಲಿ ಶಾಸಕರನ್ನು ಶಿಸ್ತುಬದ್ಧವಾಗಿ ಇರಿಸಿದರೆ, ಸ್ವಾತಂತ್ರ್ಯ ಕೊಟ್ಟರೆ ಅವರೇಕೆ ಹೊರಗೆ ಹೋಗುತ್ತಾರೆ. ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಭೇಟಿಗೂ ಅವಕಾಶ ಇರಲಿಲ್ಲ. ಬಿಜೆಪಿಯಲ್ಲಿ ಈ ರೀತಿಯ ವ್ಯವಸ್ಥೆ ಇಲ್ಲ. ಇಲ್ಲಿ ಆಂತರಿಕ ಪ್ರಜಾಪ್ರಭುತ್ವವಿದ್ದು, ಎಲ್ಲರೊಂದಿಗೆ ಮುಕ್ತವಾಗಿ ಮಾತುಕತೆ ನಡೆಸಲು ಅವಕಾಶವಿದೆ. ಮೋದಿ ಅವರಂತಹ ಉತ್ತಮ ನಾಯಕರು ಇದ್ದಾರೆ. ಹೀಗಾಗಿ ಬೇರೆ ಪಕ್ಷದವರು ಬಿಜೆಪಿಗೆ ಬರುತ್ತಾರೆ ಎಂದು ಮಹಾರಾಷ್ಟ್ರದ ರಾಜಕೀಯ ಕುರಿತು ಈಶ್ವರಪ್ಪ ವಿವರಿಸಿದರು.