Home ಟಾಪ್ ಸುದ್ದಿಗಳು ಪರೇಶ್ ಮೆಸ್ತಾ ಆಕಸ್ಮಿಕ ಸಾವಿನಲ್ಲಿ ಬಿಜೆಪಿ ಶವ ರಾಜಕೀಯ ಮಾಡಿದೆ: ಕಾಂಗ್ರೆಸ್

ಪರೇಶ್ ಮೆಸ್ತಾ ಆಕಸ್ಮಿಕ ಸಾವಿನಲ್ಲಿ ಬಿಜೆಪಿ ಶವ ರಾಜಕೀಯ ಮಾಡಿದೆ: ಕಾಂಗ್ರೆಸ್

ಭಟ್ಕಳ: ಹೊನ್ನಾವರದ ಪರೇಶ್ ಮೇಸ್ತ ಸಾವಿನ ಪ್ರಕರಣವನ್ನು ಕರ್ನಾಟಕದ ಕರಾವಳಿಯಲ್ಲಿ ಉದ್ವಿಗ್ನ ವಾತಾವರಣ ಸೃಷ್ಟಿಸಿದ್ದ ಬಿಜೆಪಿ, ಈಗ ಆಕಸ್ಮಿಕ ಸಾವು ಎಂದು ಸಿಬಿಐ ತನಿಖಾ ವರದಿ ಬಂದ ನಂತರ ನಾಡಿನ ಜನತೆಯ ಕ್ಷಮೆ ಕೋರಬೇಕು ಎಂದು ಭಟ್ಕಳದಲ್ಲಿ ಕಾಂಗ್ರೆಸ್ ಮುಖಂಡರು ಆಗ್ರಹಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ ನಾಯ್ಕ, ಅಂದು ಪರೇಶ್ ಮೆಸ್ತಾ ಆಕಸ್ಮಿಕ ಸಾವನ್ನು ಬಿಜೆಪಿಯು ಶವ ರಾಜಕೀಯ ಮಾಡಿತ್ತು ಎಂದು ಆರೋಪ ಮಾಡಿದರು.


ಬಿಜೆಪಿಯವರು ಮೇಸ್ತ ಸಾವನ್ನು ಕಾಂಗ್ರೆಸ್ ಸರಕಾರದ ಮೇಲೆ ಹೊರಿಸಿ ಚುನಾವಣಾ ವಿಷಯವನ್ನಾಗಿ ಮಾಡಿಕೊಂಡು ಇಡೀ ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸಿ, ಐಜಿಪಿ ಕಾರನ್ನೇ ಸುಟ್ಟು ಹಾಕಲಾಗಿತ್ತು. ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯನ್ನುಂಟು ಮಾಡಿದ್ದಲ್ಲದೇ, ಅನೇಕ ಅಮಾಯಕರ ಮೇಲೆ ಪ್ರಕರಣ ದಾಖಲಾಗುವಂತೆ ಮಾಡಿದ್ದರು. ಪರೇಶ್ ಮೇಸ್ತರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ ಎಂದು ಅಲ್ಪಸಂಖ್ಯಾತರ ಮೇಲೆ ಆರೋಪ ಹೊರಿಸಿ, ಸುಳ್ಳು ಸುದ್ದಿಯನ್ನು ಹರಿಬಿಡುವ ಪ್ರಯತ್ನ ನಡೆಯಿತು ಎಂದು ಅವರು ಆರೋಪಿಸಿದರು.
ತನಿಖೆ ನಡೆಸುತ್ತಿರುವ ಪೊಲೀಸರ ಮೇಲೆ ಭರವಸೆ ಇಲ್ಲ, ಪೋಸ್ಟ್ ಮಾರ್ಟಮ್ ಅನ್ನು ಮಣಿಪಾಲ ವೈದ್ಯರಿಂದಲೇ ನಡೆಸಬೇಕು ಎಂದಿದ್ದರು. ಆಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ, ಮಣಿಪಾಲ ಆಸ್ಪತ್ರೆಯಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸುವಂತೆ ಹಾಗೂ ಪ್ರಕರಣದ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸುವಂತೆ ಕ್ರಮ ಕೈಗೊಂಡಿತ್ತು ಎಂದು ಅವರು ವಿವರಿಸಿದರು.


ಸಿಬಿಐ ಕಳೆದ ನಾಲ್ಕೂವರೆ ವರ್ಷಗಳಿಂದ ಪರೇಶ ಮೇಸ್ತ ಸಾವು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಬಿ ರಿಪೋರ್ಟ ಸಲ್ಲಿಸಿದೆ. ಪರೇಶ್ ಮೇಸ್ತನ ಕುಟುಂಬದವರಿಗೆ ಕೆಡಿಸಿಸಿ ಬ್ಯಾಂಕಿನಲ್ಲಿ ಉದ್ಯೋಗ ಕೊಡಿಸುವ ಪ್ರಯತ್ನವನ್ನು ಕಾಂಗ್ರೆಸ್ ನಾಯಕರು ಮಾಡಿದ್ದರು. ಕಾಂಗ್ರೆಸ್ ಮುಖಂಡ ಆರ್.ವಿ. ದೇಶಪಾಂಡೆಯವರು ರೂ. 2 ಲಕ್ಷ ಪರಿಹಾರ ಧನ ನೀಡಲು ಮುಂದಾಗಿದ್ದರು. ಆದರೆ ಬಿಜೆಪಿಯವರು ಪರೇಶ್ ಮೇಸ್ತನ ತಂದೆಯ ಮೇಲೆ ಒತ್ತಡ ಹಾಕಿ ಉದ್ಯೋಗ, ಪರಿಹಾರ ಧನ ಸ್ವೀಕರಿಸದಂತೆ ಮಾಡಿದರು. ಚುನಾವಣಾ ಪ್ರಚಾರಕ್ಕೆ ಪರೇಶ್ ಮೇಸ್ತನ ತಂದೆಯನ್ನು ಎಲ್ಲಾ ಕಡೆ ಕರೆದುಕೊಂಡು ಹೋಗಿ, ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಅಪಪ್ರಚಾರ ಮಾಡಿದರು. ಅವರ ಹೊಲಸು ರಾಜಕಾರಣ ಎಷ್ಟಿತ್ತು ಎಂದರೆ ಕೊಲೆಗೆ ಸಿದ್ದರಾಮಯ್ಯನವರೇ ನೇರ ಹೊಣೆ ಎಂದರು. ಈಗ ಬಿಜೆಪಿಯವರಿಗೆ ಹೇಳಲು ಏನೂ ಉಳಿದಿಲ್ಲ ಎಂದು ಅವರು ವ್ಯಂಗ್ಯವಾಡಿದರು.


ಬಿಜೆಪಿಯವರು ಸುಳ್ಳನ್ನು ಸತ್ಯ ಎಂದು ನಂಬಿಸಿ ಅಮಾಯಕ ಜನರನ್ನು ಮೊಸ ಮಾಡುತ್ತಾರೆ. ಅಂದು ರಾಜ್ಯದ ಆಡಳಿತದಲ್ಲಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪರೇಶ್ ಮೆಸ್ತಾ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಯಾಗಬೇಕೆಂಬ ಉದ್ದೇಶದಿಂದ ಸಿಬಿಐಗೆ ವಹಿಸಿತ್ತು. ಆದರೆ ಪರೇಶ್ ಮೇಸ್ತನ ತಂದೆಯವರ ಮುಗ್ದತೆಯನ್ನು ಬಿಜೆಪಿಯವರು ದುರುಪಯೋಗಪಡಿಸಿಕೊಂಡು ಕಾಂಗ್ರೆಸ್ ಸರಕಾರದ ವಿರುದ್ಧ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿತು. ಅಂದು ಶವ ಪರೀಕ್ಷೆಯನ್ನು ಮಣಿಪಾಲದಲ್ಲಿಯೇ ಮಾಡಬೇಕೆಂದು ಪಟ್ಟುಹಿಡಿದ ಬಿಜೆಪಿ ಇಂದು ಮರೆತಂತಿದೆ. ಸಿ.ಬಿ.ಐ. ದೇಶದ ಅತ್ಯುನ್ನತ ತನಿಖಾ ಸಂಸ್ಥೆಯಾಗಿದ್ದು, ಅವರು ಅಂತಿಮ ಬಿ ವರದಿಯನ್ನು ಸಲ್ಲಿಸಿದ ನಂತರ ಅದನ್ನು ಪ್ರಶ್ನೆ ಮಾಡುತ್ತೇವೆ ಎನ್ನುವುದು ಹಾಸ್ಯಾಸ್ಪದ ಎಂದು ಹೇಳಿದರು.


ಅಕಸ್ಮಿಕ ಸಾವನ್ನು ಕೊಲೆ ಎಂದು ಬಿಂಬಿಸಿ, ಜಿಲ್ಲೆಯಲ್ಲಿ ಗಲಭೆ ಸೃಷ್ಟಿಸಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತೆ ಮಾಡಿದ ಬಿಜೆಪಿ ಕೃತ್ಯ ಖಂಡನೀಯ. ಸಾವಿನ ಬಗ್ಗೆ ಅಪಪ್ರಚಾರದಿಂದ ರಾಜ್ಯದಲ್ಲಿ 50 ರಿಂದ 60 ಬಿಜೆಪಿ ಶಾಸಕರು ಆಯ್ಕೆಯಾಗಿದ್ದು, ಅವರೆಲ್ಲರೂ ರಾಜೀನಾಮೆ ಕೊಟ್ಟು ಪುನಃ ಚುನಾವಣೆ ಎದುರಿಸಲಿ ಎಂದು ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ ಅಳ್ವೇಕೋಡಿ ಸವಾಲು ಹಾಕಿದರು.
ಅಲ್ಲದೇ, ಪರೇಶ್ ಮೇಸ್ತ ಅವರ ಕುಟುಂಬಕ್ಕೆ ಅಂದು ನಮ್ಮ ನಾಯಕ ದೇಶಪಾಂಡೆಯವರು ಕೊಟ್ಟ 2 ಲಕ್ಷ ರೂಪಾಯಿಯನ್ನು ಕುಟುಂಬದವರು ನಿರಾಕರಿಸಿದ್ದರು, ಆ ಹಣ ವಾಪಾಸು ದೇಶಪಾಂಡೆಯವರಿಗೆ ತಲುಪಿಲ್ಲ. ಹಾಗಾದರೆ ಅದು ಎಲ್ಲಿ ಹೋಯಿತು ಎಂದು ಜನತೆಗೆ ತಿಳಿಸಬೇಕಾಗಿದೆ ಎಂದು ಹೇಳಿದರು.


ಹನಿಹನಿ ರಕ್ತಕ್ಕೂ ನ್ಯಾಯ ಕೊಡುವ ಅನಂತಕುಮಾರ ಎಲ್ಲಿದ್ದಾರೆ? ಬಾಯಿಗೆ ಬಂದ ಹಾಗೆ ಮಾತನಾಡುವ ಶೋಭಕ್ಕ ಎಲ್ಲಿದ್ದಾರೆ? ಹರಕು ಬಾಯಿಯ ಈಶ್ವರಪ್ಪ ಎಲ್ಲಿದ್ದಾರೆ? ಸ್ವತಃ ಅಮಿತ್ ಶಾರವರೇ ರಾಜಕಾರಣ ಮಾಡಲು ಪರೇಶ್ ಮೇಸ್ತನ ಮನೆಗೆ ಬಂದಿದ್ದರು. ಹಿಂದೆಲ್ಲಾ ಜಗನ್ನಾಥ ಶೆಟ್ಟಿ ಆಯೋಗ, ರಾಮಚಂದ್ರ ಆಯೋಗ ಅಂತೆಲ್ಲ ರಸ್ತೆಗೆ ಇಳಿಯುತ್ತಿದ್ದರು. ಬಿಜೆಪಿ ಇಷ್ಟು ವರ್ಷಗಳ ಕಾಲ ಆಡಳಿತ ನಡೆಸುತ್ತಿದ್ದರೂ ಆ ವರದಿಗಳೆಲ್ಲ ಎಲ್ಲಿ ಹೋಯಿತು. ಮುಖ್ಯಮಂತ್ರಿಯಾದರೂ ಯಡಿಯೂರಪ್ಪ ಮಾತನಾಡಲಿಲ್ಲ, ಸಿಬಿಐ ಅತ್ಯುನ್ನತ ತನಿಖೆ ಸಂಸ್ಥೆ ಎನ್ನುವವರು ಈಗ ಅದರ ಬಗ್ಗೆ ಗೌರವ ನೀಡದೇ ಹೇಳಿಕೆ ಕೊಡುತ್ತಿದ್ದಾರೆ. ಆಝಾದ್ ಅಣ್ಣಿಗೇರಿ ಎಂಬ ಅಲ್ಪಸಂಖ್ಯಾತ ವ್ಯಕ್ತಿಗೆ ಅಂತಾರಾಷ್ಟ್ರೀಯ ಮಟ್ಟದ ಭಯೋತ್ಪಾದಕನೊಂದಿಗೆ ಸಂಪರ್ಕ ಇದೆ ಎಂದು ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಹೇಳಿದ್ದರು. ಆತನನ್ನು ಪರೇಶ್ ಮೇಸ್ತನ ಕೊಲೆಗಾರ ಎಂದು ಅಪಪ್ರಚಾರ ಮಾಡಿದವರು, ನಂತರ ಅದೇ ವ್ಯಕ್ತಿಯನ್ನು ವಕ್ಫ್ ಮಂಡಳಿಗೆ ಆಯ್ಕೆ ಮಾಡಿದರು. ಈ ಬಿಜೆಪಿಯವರಿಗೆ ಏನಾಗಿದೆ? ಪರೇಶ್ ಮೇಸ್ತನ ಹೆಸರು ಹೇಳಿಕೊಂಡು ಚುನಾವಣೆ ಗೆದ್ದ ಎಲ್ಲಾ ಶಾಸಕರು ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸಲಿ ಎಂದೂ ಅವರು ಹೇಳಿದರು.


ಕಾಂಗ್ರೆಸ್ ಮುಖಂಡರಾದ ಟಿ.ಡಿ. ನಾಯ್ಕ, ವೆಂಕಟೇಶ ನಾಯ್ಕ ಚಿತ್ರಾಪುರ, ಕೆ.ಜಿ.ನಾಯ್ಕ, ಮಹಾಬಲೇಶ್ವರ ನಾಯ್ಕ, ಮಹೇಶ ನಾಯ್ಕ, ನಾಗೇಶ ದೇವಾಡಿಗ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವನಾಥ ಶೆಟ್ಟಿ, ಸಚಿನ್ ನಾಯ್ಕ, ಮಂಜುನಾಥ ನಾಯ್ಕ ಮುಂಡಳ್ಳಿ ಉಪಸ್ಥಿತರಿದ್ದರು.

Join Whatsapp
Exit mobile version