Home ಟಾಪ್ ಸುದ್ದಿಗಳು ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಸೇರ್ಪಡೆ

ಬೆಂಗಳೂರು: ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ಕ್ಷೇತ್ರದಲ್ಲಿ ಸ್ಪರ್ಧಿಸಲು ಬಿಜೆಪಿಯಿಂದ ಟಿಕೆಟ್ ದೊರಕದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಬಿಜೆಪಿಗೆ ಗುಡ್‌ ಬೈ ಹೇಳಿದ್ದು, ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ವರಿಷ್ಠರ ಸಂಧಾನಕ್ಕೆ ಮಣಿಯದ ಶೆಟ್ಟರ್ ಕೆಪಿಸಿಸಿ ಕಚೇರಿಯಲ್ಲಿ ಇಂದು ಬೆಳಗ್ಗೆ 9.30ಗೆ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.

ಇಂದು ಬಿಜೆಪಿ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರನ್ನು ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಅವರು ಪಕ್ಷಕ್ಕೆ ಬರಮಾಡಿಕೊಂಡು, ಮಾತನಾಡಿದರು.  

ಜಗದೀಶ್ ಶೆಟ್ಟರ್ ಅವರನ್ನು ಆತ್ಮೀಯವಾಗಿ ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಅವರು ಕರ್ನಾಟಕ ಕಂಡ ಸಜ್ಜನ ರಾಜಕಾರಣಿ. ಅವರು ಆರ್ ಎಸ್ಎಸ್ ನಿಂದ ಬಂದಿದ್ದರೂ ಜಾತ್ಯಾತೀತ ತತ್ವದ ಮೇಲೆಯೇ ಕೆಲಸ ಮಾಡಿದ್ದಾರೆ. ನಾನು ಅವರನ್ನು ಹತ್ತಿರದಿಂದ ಕಂಡಿದ್ದೇನೆ. ಅವರು ಮುಖ್ಯಮಂತ್ರಿಯಾಗಿದ್ದಾಗ ನಾನು ವಿರೋಧ ಪಕ್ಷದ ನಾಯಕನಾಗಿ, ನಾನು ಮುಖ್ಯಮಂತ್ರಿಯಾಗಿದ್ದಾಗ ಅವರು ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಎಂದಿಗೂ ತಮ್ಮ ವೈಯಕ್ತಿಕ ಕೆಲಸಕ್ಕಾಗಿ ಭೇಟಿ ಮಾಡಿದವರಲ್ಲ. ಐದು ವರ್ಷಗಳ ಕಾಲ ವಿಧಾನಸಭೆ ಒಳಗೆ ಹಾಗೂ ಹೊರಗೆ ಬಿಜೆಪಿ ಪರವಾಗಿ ಹೋರಾಟ ಮಾಡಿದ್ದರು. ಬಹಳ ನಿಷ್ಠಾವಂತರಾಗಿದ್ದರು. ಬಿಜೆಪಿಯ ನೀತಿ ಕಾರ್ಯಕ್ರಮಗಳ ಬಗ್ಗೆ ರಾಜೀ ಮಾಡಿಕೊಳ್ಳುತ್ತಿರಿಲಿಲ್ಲ. ಸ್ವಾರ್ಥಕ್ಕಾಗಿ ಅದನ್ನು ಬಲಿ ಕೊಟ್ಟಿರಲಿಲ್ಲ. ನಮ್ಮ ಸರ್ಕಾರದ ವಿರುದ್ಧ ಹೋರಾಟವನ್ನು ಮಾಡಿದ್ದಾರೆ ಎಂದು ಹೇಳಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷದ ಕೆಲಸವನ್ನು ನಿರ್ಭಯವಾಗಿ ನಿಷ್ಟೂರವಾಗಿ ಕೆಲಸ ಮಾಡುತ್ತಿದ್ದರು. ಕೃಷ್ಣ ಅವರ ಕಾಲದಲ್ಲೂ ವಿರೋಧ ಪಕ್ಷದ ನಾಯಕರಾಗಿದ್ದರು. ಅವರು ಕೇವಲ ಉತ್ತರ ಕರ್ನಾಟ ನಾಯಕರಲ್ಲ, ಅವರು ಇಡೀ ರಾಜ್ಯದ ನಾಯಕರು. ಲಂಗಾಯತ ಸಮಾಜ ದೊಡ್ಡ ಸಮಾಜ. ಸಮಾನ್ಯವಾಗಿ ಯಡಿಯೂರಪ್ಪ ಅವರನ್ನು ಆ ಸಮಾಜದ ನಾಯಕ ಎಂದು ಬಿಂಬಿಸುತ್ತಾರೆ. ಎರಡನೇ ಸ್ಥಾನದಲ್ಲಿ ನೋಡುತ್ತಿದ್ದದ್ದು ಶೆಟ್ಟರ್ ಅವರನ್ನು. ಬಿಜೆಪಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ನಿರ್ದಾಕ್ಷಣ್ಯವಾಗಿ ತೆಗೆದು ಅಪಮಾನ ಮಾಡಿದರು. ಅವರ ಕಣ್ಣೀರು ಹಾಕಿಸಿದರು. ಜಗದೀಶ್ ಶೆಟ್ಟರ್ ಅವರು ಲಿಂಗಾಯತ ಸಮಾಜದ ದೊಡ್ಡ ನಾಯಕರೆಂದು ಗುರುತಿಸಿಕೊಂಡಿದ್ದರು. ಅವರು ಬಹಳ ನೋವಿನಿಂದ ಮಾತನಾಡಿದ್ದಾರೆ. ಬಹುಶಃ ಬಿಜೆಪಿ ಅವರನ್ನು ನಡೆಸಿಕೊಂಡಿರುವ ರೀತಿ ಯಾವ ಪಕ್ಷದಲ್ಲಿ ಯಾವುದೇ ನಾಯಕರಿಗೆ ಆಗಬಾರದು ಎಂದು ಅವರು ಹೇಳಿದರು.

ಯಾವುದೇ ಕಾರಣ ಇಲ್ಲದೇ, ಆರೋಪವಿಲ್ಲದೆ, ಬಿಜೆಪಿಯವರು ಅವರಿಗೆ ಟಿಕೆಟ್ ವಂಚಿಸಿದ್ದಾರೆ. ಇದು ದುರುದ್ದೇಶ ಎಂದು ಎಲ್ಲರಿಗೂ ಅರ್ಥವಾಗುತ್ತದೆ. ನಾನು ನೋಡಿದಾಗೆ ಶೆಟ್ಟರ್ ಅವರು ರಾಜ್ಯದ ರಾಜಕಾರಣಿಗಳಲ್ಲಿ ಸ್ವಾಭಿಮಾನಿ ರಾಜಕಾರಣಿ. ಎವರು ಸ್ವಾಭಿಮಾನಕ್ಕೆ ಧಕ್ಕೆಯಾಗುವಂತಹ ಕೆಲಸ ಮಾಡಿಲ್ಲ. ಈಗ ಅವರ ಸ್ವಾಭಿಮಾನ, ಸಮುದಾಯಕ್ಕೆ ಧಕ್ಕೆಯಾಗಿದೆ. ಅವರ ಅನುಯಾಯಿ, ಸ್ನೇಹಿತರಿಗೆ ಧಕ್ಕೆಯಾಗಿದೆ. ಇದು ಸಹಿಸಲಾಗದ ಅಪಮಾನ. ನಾನು ಕೂಡ ಇದನ್ನು ನಿರೀಕ್ಷೆ ಮಾಡಿರಲಿಲ್ಲ. ನಿಮಗೆ ಇಂತಹ ಅನ್ಯಾಯವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದು ಅವರನ್ನು ಭೇಟಿಯಾದಾಗ ಹೇಳಿದೆ. ಈ ರೀತಿ ಏಕಾಏಕಿ, ಯಾವುದೇ ಮುನ್ಸೂಚನೆ ಇಲ್ಲದೆ ಟಿಕೆಟ್ ತಪ್ಪಿಸಿರುವುದು ಘೋರ ಅಪರಾಧ. ಅವರು ತಮ್ಮ ಸ್ವಾಭಿಮಾನ ರಕ್ಷಣೆಗೆ ಪಕ್ಷ ಬಿಡಲು ತೀರ್ಮಾನಿಸಿದ್ದಾರೆ. ಅವರು ಎಲ್ಲರ ಜತೆ ಚರ್ಚಿಸಿ ಅಳೆದು ತೂಗಿ ಇದನ್ನು ಸವಾಲು ಎಂದು ಸ್ವೀಕರಿಸಿ ಅಂತಿಮವಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಿದ್ದಾರೆ. ಎಐಸಿಸಿ ಅಧ್ಯಕ್ಷರು, ಪ್ರದಾನ ಕಾರ್ಯದರ್ಶಿಗಳ ಸಮ್ಮುಖದಲ್ಲಿ ಅವರು ಪಕ್ಷ ಸೇರುತ್ತಿದ್ದಾರೆ. ನಾವೆಲ್ಲರೂ ನಿಮ್ಮನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ. ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿದರು.

ಅಮರ ಸಿಂಗ್ ಪಾಟೀಲ್ ಅವರು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿದ್ದು, ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ಶೆಟ್ಟರ್ ಅವರ ಆಗಮನದಿಂದ ಪಕ್ಷಕ್ಕೆ ದೊಡ್ಡ ಶಕ್ತಿ ಬಂದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ಅವರ ಸೇರ್ಪಡೆಯಿಂದ ಕಾಂಗ್ರೆಸ್ 150ಕ್ಕೂ ಹೆಚ್ಚು ಕ್ಷೇತ್ರ ಗೆಲ್ಲಲಿದೆ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp
Exit mobile version