ಸ್ಯಾಂಟ್ರೋ ರವಿ, ಶ್ರೀಕಿ ಪ್ರಕರಣಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೈತ್ರಿ: ಎಎಪಿ ಆರೋಪ, ಕ್ರಮಕ್ಕೆ ಒತ್ತಾಯ

Prasthutha|

- Advertisement -


ಬೆಂಗಳೂರು: ಪವರ್ ಬ್ರೋಕರ್ ಸ್ಯಾಂಟ್ರೋ ರವಿ ಪ್ರಕರಣದ ತನಿಖೆಗೆ ಸಂಬಂಧಿಸಿ ಆಮ್ ಆದ್ಮಿ ಪಾರ್ಟಿ ರಾಜ್ಯ ಸಂವಹನಾ ಉಸ್ತುವಾರಿ ಬ್ರಿಜೇಶ್ ಕಾಳಪ್ಪ ಅವರು ಕರ್ನಾಟಕ ಸರ್ಕಾರಕ್ಕೆ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ.


ಆಮ್ ಆದ್ಮಿ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಬ್ರಿಜೇಶ್ ಕಾಳಪ್ಪ, “ಸ್ಯಾಂಟ್ರೋ ರವಿಯನ್ನು ಬಂಧಿಸಿ ಎರಡು ವಾರಗಳು ಕಳೆದಿವೆ. ಆದರೂ ಸರ್ಕಾರವು ತನಿಖೆ ಕುರಿತು ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಸರ್ಕಾರವು ಆತನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆಯೇ?” ಎಂದು ಪ್ರಶ್ನಿಸಿದರು.

- Advertisement -


“ರವಿಯನ್ನು ಕರ್ನಾಟಕದ ಬದಲು ಗುಜರಾತ್’ನಲ್ಲಿ ಬಂಧಿಸಿದ್ದೇಕೆ? ಆತ ಗುಜರಾತ್’ಗೆ ತೆರಳಲು ಕಾರಣವೇನು? ಆತನಿಗೆ ಯಾವ್ಯಾವ ವ್ಯಕ್ತಿಗಳೊಂದಿಗೆ ʻಸರಕುʼ ಪೂರೈಸುವ ವ್ಯವಹಾರಗಳಿದ್ದವು? ಸಾವಿರಾರು ಕೋಟಿ ಆಸ್ತಿ ಗಳಿಸಲು ಸ್ಯಾಂಟ್ರೋ ರವಿಗೆ ಸಹಾಯ ಮಾಡಿದವರ ವಿರುದ್ಧ ಸರ್ಕಾರ ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಅಷ್ಟು ಹಣವಿದ್ದರೂ ಇಡಿ, ಸಿಬಿಐ ಅಥವಾ ಆದಾಯ ತೆರಿಗೆ ಇಲಾಖೆ ತನಿಖೆ ಆರಂಭಿಸದಿರಲು ಕಾರಣವೇನು?” ಎಂಬ ಪ್ರಶ್ನೆಗಳನ್ನು ಬ್ರಿಜೇಶ್ ಕಾಳಪ್ಪ ಸರ್ಕಾರಕ್ಕೆ ಕೇಳಿದರು.


“ಸರ್ಕಾರಿ ಅತಿಥಿ ಗೃಹವಾದ ಕುಮಾರಕೃಪಾದಲ್ಲಿ ವಾಸವಿರಲು ಸ್ಯಾಂಟ್ರೋ ರವಿಗೆ ಸಹಾಯ ಮಾಡಿದವರು ಯಾರು? ಬಂಧನದಲ್ಲಿರುವ ಸ್ಯಾಂಟ್ರೋ ರವಿಯಲ್ಲಿ ಓವರ್’ಡೋಸ್ ಔಷಧಿಗಳು ಹೇಗೆ ಪತ್ತೆಯಾದವು?” ಎಂದು ಕೂಡ ಬ್ರಿಜೇಶ್ ಕಾಳಪ್ಪ ಪ್ರಶ್ನಿಸಿದರು. ರವಿ ಪ್ರಕರಣದಲ್ಲಿರುವ ಮಾಹಿತಿಯ ಕೊರತೆಯನ್ನು ಅಜ್ಮಲ್ ಕಸಬ್ ಪ್ರಕರಣಕ್ಕೆ ಹೋಲಿಕೆ ಮಾಡಿದ ಅವರು, ಸಾರ್ವಜನಿಕರಿಗೆ ಸ್ಯಾಂಟ್ರೋ ರವಿಗಿಂತ ಅಜ್ಮಲ್ ಕಸಬ್ನ ದೈನಂದಿನ ಚಟುವಟಿಕೆಗಳ ಬಗ್ಗೆ ಹೆಚ್ಚು ಮಾಹಿತಿಯಿತ್ತು ಎಂದು ಹೇಳಿದರು.


ರವಿ ಪತ್ನಿ ಮೇಲಿನ ದೌರ್ಜನ್ಯ ಆರೋಪದ ದೂರಿನ ಬಗ್ಗೆ ಮಾತ್ರ ತನಿಖೆ ನಡೆಯುತ್ತಿದೆ ಎಂಬ ಎಡಿಜಿಪಿ ಅಲೋಕ್ ಕುಮಾರ್ರವರ ಹೇಳಿಕೆಗೆ ಸಂಬಂಧಿಸಿದ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬ್ರಿಜೇಶ್ ಕಾಳಪ್ಪ, “ಈ ಬಿಳಿ ಕಾಲರ್ ಅಪರಾಧಿಗೆ ರಾಜಕಾರಣಿಗಳ ಜೊತೆಗಿರುವ ಸಂಬಂಧದ ಕುರಿತು ಎಡಿಜಿಪಿ ಯಾಕೆ ತನಿಖೆ ನಡೆಸುತ್ತಿಲ್ಲ? ಅಲೋಕ್ ಕುಮಾರ್’ರವರು ರಾಜಕೀಯ ಒತ್ತಡಕ್ಕೆ ಬಗ್ಗಬಾರದು. ಅವರು ತಪ್ಪಿತಸ್ಥರ ಪರವಾಗಿ ಕೆಲಸ ಮಾಡುವುದಾದರೆ, ಆ ಸ್ಥಾನದಲ್ಲಿ ಮುಂದುವರಿಯಲು ಅಸಮರ್ಥ ಎಂದಾಗುತ್ತದೆ” ಎಂದು ಹೇಳಿದರು.
“ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರೂ ಪಕ್ಷಗಳಿಗೆ ಸಹಾಯ ಮಾಡಿದ್ದಾಗಿ ಸ್ಯಾಂಟ್ರೋ ರವಿ ಸ್ವತಃ ಹೇಳಿದ್ದರಿಂದಾಗಿ ಮೂರೂ ಪಕ್ಷಗಳು ಈ ಪ್ರಕರಣಕ್ಕೆ ಸಂಬಂಧಿಸಿ ಮೌನಕ್ಕೆ ಶರಣಾಗಿವೆ. ಈ ಪಕ್ಷಗಳು ಸ್ಯಾಂಟ್ರೋ ರವಿ ಹಾಗೂ ಶ್ರೀಕಿ ಪ್ರಕರಣದಲ್ಲಿ ಒಗ್ಗೂಡಿದ್ದು, ಈ ಕ್ರಿಮಿನಲ್ಗಳ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳದಿರುವುದಕ್ಕೆ ಸಂತೋಷ ಪಡುತ್ತಿವೆ” ಎಂದು ಬ್ರಿಜೇಶ್ ಕಾಳಪ್ಪ ಹೇಳಿದರು.

Join Whatsapp