Home ಟಾಪ್ ಸುದ್ದಿಗಳು ಪಕ್ಷಕ್ಕೆ 1 ಕೋಟಿ ಮತ ತನ್ನಿ, 70 ರೂಪಾಯಿಗೆ ಮದ್ಯ ಪಡೆಯಿರಿ: ಆಂಧ್ರ ಪ್ರದೇಶದ ಬಿಜೆಪಿ...

ಪಕ್ಷಕ್ಕೆ 1 ಕೋಟಿ ಮತ ತನ್ನಿ, 70 ರೂಪಾಯಿಗೆ ಮದ್ಯ ಪಡೆಯಿರಿ: ಆಂಧ್ರ ಪ್ರದೇಶದ ಬಿಜೆಪಿ ರಾಜ್ಯಾಧ್ಯಕ್ಷನಿಂದ ಹೀಗೊಂದು ಆಫರ್

ಆಂಧ್ರ ಪ್ರದೇಶ: ನಮ್ಮ ಪಕ್ಷವು ರಾಜ್ಯದಲ್ಲಿ ಒಂದು ಕೋಟಿ ಮತ ತಂದರೆ ನಾವು ಮದ್ಯದ ಬೆಲೆಯನ್ನು ದರವನ್ನು ಕಡಿಮೆ ಮಾಡುವುದಾಗಿ ಬಿಜೆಪಿ ಆಂಧ್ರ ಪ್ರದೇಶ ಘಟಕದ ಅಧ್ಯಕ್ಷ ಸೋಮು ವೀರರಾಜು ಆಶ್ವಾಸನೆ ನೀಡಿದ್ದಾರೆ.

ಆಂಧ್ರದಲ್ಲಿ ವಿಧಾನ ಸಭಾ ಚುನಾವಣೆಯು 2024ರಲ್ಲಿ ನಡೆಯಲಿದೆ. ಅದಕ್ಕೆ ಮೊದಲು ಲೋಕ ಸಭಾ ಚುನಾವಣೆ ನಡೆಯಲಿದೆ.

“ಭಾರತೀಯ ಜನತಾ ಪಕ್ಷಕ್ಕೆ ಒಂದು ಕೋಟಿ ಮತ ಬರುವಂತೆ ಮಾಡಿ, ನಾವು ರೂ. 70ಕ್ಕೆ ಮದ್ಯ ಸಿಗುವಂತೆ ಮಾಡುತ್ತೇವೆ. ನಾವು ಇನ್ನಷ್ಟು ಆದಾಯ ಉಳಿಸುವಂತಾದರೆ ರೂ. 50ಕ್ಕೇ ಮದ್ಯ ಒದಗಿಸುವುದಾಗಿಯೂ ಅವರು ಭರವಸೆ ನೀಡಿರುವ ವೀಡಿಯೋ ವೈರಲ್ ಆಗಿದೆ.

ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಈಗಿನ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಜಗನ್ ಮೋಹನ್ ರೆಡ್ಡಿ ಸರಕಾರವನ್ನು ಮನೆಗೆ ಕಳುಹಿಸುವ ಗುರಿಯನ್ನು ನಾವು ಹೊಂದಿದ್ದೇವೆ. ಪ್ರಜೆಗಳ ಸಿಟ್ಟನ್ನು ತಿಳಿಸುವ ಪ್ರಜಾ ಆಗ್ರಹ ಸಭಾ ಎಂಬ ಕಾರ್ಯಕ್ರಮವನ್ನು ಬಿಜೆಪಿಯು ವಿಜಯವಾಡಾದಲ್ಲಿ ಹಮ್ಮಿಕೊಂಡಿತ್ತು.

2019ರ ಚುನಾವಣೆಯಲ್ಲಿ ವೈಎಸ್ಆರ್ ಸಿಪಿ ಆಂಧ್ರದಲ್ಲಿ 175ರಲ್ಲಿ 151 ಸ್ಥಾನಗಳಲ್ಲಿ ಅಭೂತಪೂರ್ವ ಜಯ ಗಳಿಸಿತ್ತು. ಟಿಡಿಪಿ 23 ಕಡೆ ಜಯ ಕಂಡಿದ್ದರೆ ಬಿಜೆಪಿ ಶೂನ್ಯ ಸಾಧನೆ ಮಾಡಿತ್ತು.

2014ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ನಾಯಕತ್ವದ ಟಿಡಿಪಿ 102 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ ಅಧಿಕಾರಕ್ಕೇರಿತ್ತು. ಆಗ ಜಗನ್ ಮೋಹನ್ ರೆಡ್ಡಿಯವರ ನಾಯಕತ್ವವು 67 ಸ್ಥಾನಗಳನ್ನು ಗೆದ್ದು ಎರಡನೆಯ ಸ್ಥಾನದಲ್ಲಿತ್ತು.

ಜಗನ್ ಮೋಹನ್ ರೆಡ್ಡಿಯವರು ಅಧಿಕಾರಕ್ಕೆ ಬಂದಂದಿನಿಂದ ಹಿಂದಿನ ಟಿಡಿಪಿ ಸರಕಾರದ ಹಲವಾರು ತೀರ್ಮಾನಗಳನ್ನು ಉಲ್ಟಾ ಪಲ್ಟಾ ಮಾಡಿದ್ದಾರೆ. ಹಲವು ಕಂಪೆನಿಗಳಿಗೆ ನೀಡಿದ್ದ ಜಮೀನುಗಳನ್ನು ಕೂಡ 2020ರ ಜನವರಿಯಲ್ಲಿ ಸರಕಾರವು ಹಿಂದಕ್ಕೆ ಪಡೆದಿತ್ತು. ಅಲ್ಲದೆ ಕಾರ್ಯಾಂಗಕ್ಕೆ ವಿಶಾಖಪಟ್ಟಣ, ಶಾಸಕಾಂಗಕ್ಕೆ ಅಮರಾವತಿ, ನ್ಯಾಯಾಂಗಕ್ಕೆ ಕರ್ನೂಲ್ ಎಂದು ಮೂರು ರಾಜಧಾನಿಗಳನ್ನು ಅಭಿವೃದ್ಧಿ ಪಡಿಸುವ ತೀರ್ಮಾನವನ್ನು ಜಗನ್ ಮೋಹನ್ ರೆಡ್ಡಿ ಸರಕಾರ ಮಾಡಿತ್ತು. ಕೆಲವು ಕಡೆಯ ವಿರೋಧದ ಬಳಿಕ ಆ ತೀರ್ಮಾನವನ್ನು ಇತ್ತೀಚೆಗೆ ಸರಕಾರವು ಹಿಂದಕ್ಕೆ ಪಡೆದಿದೆ.

Join Whatsapp
Exit mobile version