Home ಟಾಪ್ ಸುದ್ದಿಗಳು ಸೋಲುವ ಹತಾಶೆಯಿಂದ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ: ಶಾಸಕ ಪೊನ್ನಣ್ಣ

ಸೋಲುವ ಹತಾಶೆಯಿಂದ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ: ಶಾಸಕ ಪೊನ್ನಣ್ಣ

ಕೊಡಗು: ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣದ ಮೂಲಕ ಎಲ್ಲೆಡೆ ಅಧಿಕಾರ ಹಿಡಿಯಲು ಹೋದ ಬಿಜೆಪಿಗೆ ಕರ್ನಾಟಕದ ಜನ ಕಳೆದ ಚುನಾವಣೆಯಲ್ಲಿ ಆಪರೇಷನ್ ಮಾಡಿದ್ದಾರೆ. ಈಗ ತಮ್ಮ ತಮ್ಮ ಪಕ್ಷ ಉಳಿಸಿಕೊಳ್ಳಲು ಬಿಜೆಪಿ, ಜೆಡಿಎಸ್ ಒಂದನ್ನೊಂದು ಅವಲಂಬಿಸಿ ಎರಡು ನಿರ್ನಾಮ ಆಗುತ್ತಿವೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದ್ದಾರೆ.

ರಾಜ್ಯದಲ್ಲಿ ಆಪರೇಷನ್ ಕಮಲಕ್ಕೆ ರಾಜ್ಯದ ಜನ ತಕ್ಕ ಉತ್ತರ ನೀಡಿದ್ದಾರೆ. ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಹೋದವರನ್ನು ಜನರು ಸೋಲಿಸಿದ್ದಾರೆ. ನಾವು ಜನರ ತೀರ್ಪನ್ನು ನಾವು ಗೌರವಿಸಬೇಕು. ಆಗಮಾತ್ರ ಜನರಿಗೆ ಗೌರವ ಕೊಟ್ಟಂತೆ ಆಗುತ್ತದೆ. ಪದೇ ಪದೆ ಪಕ್ಷಾಂತರ ನಿಷೇಧ ಕಾನೂನು ಉಲ್ಲಂಘನೆ ಪ್ರಜಾಪ್ರಭುತ್ವಕ್ಕೆ ದೊಡ್ಡ ಮಾರಕ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಸರ್ಕಾರ ಇದ್ದರೂ 34 ಜನ ಮಾತ್ರ ಸಚಿವರಾಗಲು ಸಾಧ್ಯ. ಈಗ 115 ಶಾಸಕರಲ್ಲಿ 34 ಜನ ಮಾತ್ರ ಮಂತ್ರಿಯಾಗಲು ಸಾಧ್ಯ. ಹಾಗಂತ ಉಳಿದವರು ಬೇರೆ ಪಕ್ಷಕ್ಕೆ ಹೋಗಲು ಸಾಧ್ಯನಾ ಎಂದು ಕೇಳಿದ ಶಾಸಕರು, ನಮ್ಮದು ಸುಭದ್ರವಾದ ಸರ್ಕಾರ. 136 ನಮ್ಮ ಶಾಸಕರಲ್ಲದೆ ಮೂವರು ಸ್ವತಂತ್ರ ಶಾಸಕರು, ಎಂ.ಪಿ. ಪ್ರಕಾಶ್ ಅವರ ಮಗಳು, ದರ್ಶನ್ ಪುಟ್ಟಣ್ಣಯ್ಯ ನಮ್ಮೊಂದಿಗೆ ಇದ್ದಾರೆ. ಆದ್ದರಿಂದ ಯಾರು ಸರ್ಕಾರವನ್ನು ಅಸ್ಥಿರಗೊಳಿಸಲು ಸಾಧ್ಯವೇ ಕಲ್ಲ ಎಂದರು.

ಸಿಎಂ, ಡಿಸಿಎಂ ನಡುವೆ ಗೊಂದಲಗಳಿವೆ ಎನ್ನುವ ವಿಷಯಕ್ಕೆ ಪ್ರತಿಕ್ರಿಯಿಸಿದ ಅವರು, ಯಾವುದೇ ಗೊಂದಲವೂ ಇಲ್ಲ. ಗೊಂದಲವಿದೆ ಎಂದು ವಿರೋಧ ಪಕ್ಷದವರು ಜನರ ಮನಸ್ಸಿನಲ್ಲಿ ಸೃಷ್ಟಿಸುತ್ತಿದ್ದಾರೆ ಅಷ್ಟೇ. ಆದರೆ ಅದೆಲ್ಲ ಅವರಿಗೆ ವರ್ಕೌಟ್ ಆಗುವುದಿಲ್ಲ ಎಂದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ 25 ಸಂಸದರನ್ನು ಬಿಜೆಪಿ ಗೆಲ್ಲಿಸಿಕೊಂಡಿತ್ತು. ಅಷ್ಟು ಶಕ್ತಿ ಇದ್ದರೂ ಈಗ 19 ಸ್ಥಾನಗಳನ್ನು ಗೆದ್ದಿರುವ ಪಕ್ಷದೊಂದಿಗೆ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿರುವುದು ಈ ಸಲ ಅವರಿಗಿರುವ ಭಯವನ್ನು ಸೂಚಿಸುತ್ತದೆ. ರಾಷ್ಟ್ರೀಯ ಪಕ್ಷಗಳನ್ನು ದೂರುತ್ತಾನೇ ಸಿಎಂ ಆಗಲು ಅಷ್ಟೂ ಚುನಾವಣಾ ಭಾಷಣ ಮಾಡಿದ ಕುಮಾರಸ್ವಾಮಿ ಫಲಿತಾಂಶದಿಂದ ತೀವ್ರ ಹತಾಶೆಗೊಂಡಿದ್ದಾರೆ. ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಗೊತ್ತಾಗಿ ಹತಾಶೆಗೊಂಡು ಹೆಚ್ಡಿಕೆ ಬಿಜೆಪಿಯೊಂದಿಗೆ ಮೈತ್ರಿ‌ ಮಾಡಿಕೊಂಡಿದ್ದಾರೆ ಎಂದು ಶಾಸಕರು ವ್ಯಾಖ್ಯಾನಿಸಿದರು.

Join Whatsapp
Exit mobile version