ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ 2ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಕರ್ನಾಟಕದ 20 ಲೋಕಸಭಾ ಕ್ಷೇತ್ರಗಳ ಟಿಕೆಟ್ ಹಂಚಿಕೆ ಮಾಡಲಾಗಿದೆ. 9 ಹಾಲಿ ಸಂಸದರಿಗೆ ಟಿಕೆಟ್ ಸಿಗದೇ ತೀವ್ರ ನಿರಾಸೆಯಾಗಿದ್ದರೆ, ಕೆಲವು ಕಡೆ ಅಪಾರ ನಿರೀಕ್ಷೆಯಿಟ್ಟು ಟಿಕೆಟ್ ಸಿಗದೇ ನಿರಾಸೆ ಅನುಭವಿಸಿದವರು ಇದ್ದಾರೆ.
ಹಾಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್- ದಕ್ಷಿಣ ಕನ್ನಡ, ಪ್ರತಾಪ್ ಸಿಂಹ- ಮೈಸೂರು, ಕರಡಿ ಸಂಗಣ್ಣ- ಕೊಪ್ಪಳ, ಶಿವಕುಮಾರ್ ಉದಾಸಿ- ಹಾವೇರಿ, ಸದಾನಂದಗೌಡ- ಬೆಂಗಳೂರು ಉತ್ತರ, ಜಿ.ಎಸ್. ಬಸವರಾಜ- ತುಮಕೂರು, ದೇವೇಂದ್ರಪ್ಪ- ಬಳ್ಳಾರಿ, ಜಿ.ಎಂ. ಸಿದ್ದೇಶ್ವರ- ದಾವಣಗೆರೆ ಹಾಗೂ ಶ್ರೀನಿವಾಸ್ ಪ್ರಸಾದ್- ಚಾಮರಾಜನಗರ ಇವರು ಟಿಕೆಟ್ ಸಿಗದೇ ನಿರಾಸೆಗೊಂಡವರು.
ಮಾಜಿ ಸಿಎಂ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಈಶ್ವರಪ್ಪ (ಪುತ್ರನಿಗೆ) ಅಪಾರ ನಿರೀಕ್ಷೆಯಿಟ್ಟು ಟಿಕೆಟ್ ಸಿಗದೇ ನಿರಾಸೆ ಅನುಭವಿಸಿದವರ ಸಾಲಿನಲ್ಲಿ ನಿಲ್ಲುತ್ತಾರೆ.
ಮೈಸೂರು-ಕೊಡಗು ಲೋಕಸಭಾಕ್ಷೇತ್ರದ ಹಾಲಿ ಸಂಸದ ಪ್ರತಾಪ್ ಸಿಂಹ ಮೈಸೂರು ರಾಜ ಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗುವುದರ ಸುಳಿವು ಮೊದಲೇ ಸುಳಿವು ಸಿಕ್ಕಿದ್ದರಿಂದ ಆಕ್ರೋಶ ವ್ಯಕ್ತಪಡಿಸಿದ್ದರು. ತನಗೇ ಟಿಕೆಟ್ ಸಿಗುತ್ತದೆ ಎಂದು ಕೊನೆಯವರೆಗೂ ಹೇಳುತ್ತಿದ್ದರು. ಆದರೆ, ಯದುವೀರ್ ಒಡೆಯರ್ ಅವರಿಗೆ ಟಿಕೆಟ್ ನೀಡಿದ ನಂತರ X ಮೂಲಕ ಮಹಾರಾಜ ಯದುವೀರ್ ಅವರಿಗೆ ಶುಭಾಶಯ ಕೋರಿದ್ದಾರೆ. ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. #ದೇಶಕ್ಕಾಗಿ, ಮೋದಿಗಾಗಿ ಎಂದು X ಮಾಡಿಕೊಂಡಿದ್ದಾರೆ.
ಮಾಜಿ ಸಿಎಂ ಹಾಗೂ ಹಾಲಿ ಬಿಜೆಪಿ ಸಂಸದ ಡಿ.ವಿ. ಸದಾನಂದ ಗೌಡರಿಗೂ ಅವರಿಗೆ ಟಿಕಟ್ ಮಿಸ್ ಆಗಿದೆ. ಎರಡನೇ ಪಟ್ಟಿಗೆ ಕ್ಷಣಗಣನೆ ನಡೆಯುತ್ತಿರುವಾಗಲೂ ಟಿಕೆಟ್ ನನಗೇ ಬೇಕು ಎಂದೇ ಅವರು ಹೇಳುತ್ತಿದ್ದರು. ಇಲ್ಲದಿದ್ದರೆ ಪಕ್ಷ ಪರಿಣಾಮ ಎದುರಿಸಬೇಕಾಗುತ್ತೆ, ನನ್ನ ಘನತೆಗೆ ಚ್ಯುತಿ ಬರುತ್ತೆ ಎಂದು ಹೇಳಿದ್ದರು. ಆದರೆ ಈ ಬಾರಿ ಬೆಂಗಳೂರು ಉತ್ತರದಿಂದ ಕಣಕ್ಕೆ ಇಳಿಯಲು ಉಡುಪಿ ಬಿಜೆಪಿ ಕಾರ್ಯಕರ್ತರಿಗೆ ಬೇಡವಾಗಿದ್ದ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಲಾಗಿದೆ.
ದಕ್ಷಿಣ ಕನ್ನಡ ಲೋಕಸಭಾ ಚುನಾವಣಾ ಅಭ್ಯರ್ಥಿ ಆಯ್ಕೆಯಲ್ಲಿ ಬದಲಾವಣೆ ಮಾಡಲಾಗಿದೆ. ಆರಂಭದಲ್ಲಿ ತನಗೇ ಟಿಕೆಟ್ ಖಚಿತ ಎನ್ನುತ್ರಿದ್ದ ನಳಿನ್ ಬಳಿಕ ರಾಗ ಬದಲಾಯಿಸಿದ್ದರು. ಕರ್ನಾಟಕ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷರೂ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ನಳೀನ್ ಕುಮಾರ್ ಕಟೀಲ್ ಅವರನ್ನು ಬಿಟ್ಟು ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಭಾರತೀಯ ಭೂಸೇನೆಯಲ್ಲಿ ಕ್ಯಾಪ್ಟನ್ ಆಗಿ ಸ್ವಯಂ ನಿವೃತ್ತಿ ಪಡೆದು ಬಿಜೆಪಿಯಲ್ಲಿ ತೊಡಗಿಸಿಕೊಂಡ 42 ವರ್ಷದ ಬ್ರಿಜೇಶ್ ವಿದ್ಯಾರ್ಥಿ ದೆಸೆಯಿಂದಲೂ ಸಂಘಪರಿವಾರದಲ್ಲಿ ಗುರುತಿಸಿಕೊಂಡವರು. ಇದೀಗ ಸಂಸತ್ ಸ್ಪರ್ಧೆಯ ಟಿಕೆಟ್ ಕೊಡಲಾಗಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೆ ಟಿಕೆಟ್ ತಪ್ಪಿಸಲಾಗಿತ್ತು. ಇದನ್ನು ಶಾಂತ ಸ್ವರೂಪದಿಂದಲೇ ಸ್ವೀಕರಿಸಿದ ಈಶ್ವರಪ್ಪ, ಲೋಕಸಭೆ ಚುನಾವಣೆಗೆ ತಮ್ಮ ಪುತ್ರನಿಗೆ ಟಿಕೆಟ್ ಪಡೆಯುವ ಭರವಸೆ ಇಟ್ಟುಕೊಂಡಿದ್ದರು. ಇನ್ನು ಈ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಅವರೇ ಹಾವೇರಿ ಟಿಕೆಟ್ ಅನ್ನು ಈಶ್ವರಪ್ಪ ಅವರ ಪುತ್ರ ಕಾಂತೇಶ್ ಅವರಿಗೆ ಕೊಡಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈಗ ಬಿಜೆಪಿ ಹೈಕಮಾಂಡ್‌ನಿಂದ ಹಾವೇರಿ ಲೋಕಸಭೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ಟಿಕೆಟ್ ನೀಡಲಾಗಿದೆ. ಆದ್ದರಿಂದ ಕೆ.ಎಸ್. ಈಶ್ವರಪ್ಪ ಅವರಿಗೆ ಭಾರಿ ಅಸಮಾಧಾನ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾಳೆ ಹಾವೇರಿ ಹಾಗೂ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಬೆಂಬಲಿಗರ ಸಭೆಯನ್ನು ಕರೆದಿದ್ದಾರೆ. ನಾಳೆ ನಡೆಯುವ ಸಭೆಯ ನಂತರ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಧಾರವಾಡದ ಟಿಕೆಟ್ ಅನ್ನು ಕೇಂದ್ರ ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಘೋಷಿಸಲಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಹ್ಯಾಟ್ರಿಕ್ ಬಾರಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರಿಗೆ ಮತ್ತೆ ಟಿಕೆಟ್ ಸಿಕ್ಕಿದೆ. ಇದೇ ಕ್ಷೇತ್ರದಿಂದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಟಿಕೆಟ್ ಬಯಸಿದ್ದರು. ಆದರೆ ಅವರಿಗೆ ಬಿಜೆಪಿಯ ನಿರ್ಧಾರ ಆಘಾತ ನೀಡಿದೆ. ಧಾರವಾಡ ಜೊತೆಗೆ ಜಗದೀಶ್ ಶೆಟ್ಟರ್ ಹಾವೇರಿ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು.ಹಾವೇರಿ ಕ್ಷೇತ್ರಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಲಾಗಿದೆ. ಹೀಗಾಗಿ ಜಗದೀಶ್ ಶೆಟ್ಟರ್ ಅವರಿಗೆ ಹಾವೇರಿ ಮತ್ತು ಧಾರವಾಡ ಎರಡು ಕ್ಷೇತ್ರಗಳು ಕನಸಾಗಿಯೇ ಉಳಿದಿವೆ.