ಬೆಂಗಳೂರು: ಬಿಟ್ ಕಾಯಿನ್ ಹಗರಣವನ್ನು ಮರು ತನಿಖೆ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಈಗಲೇ ಕುಣಿದಾಡ್ತಿದ್ದಾರೆ. ನಮ್ಮ ಸರ್ಕಾರ ಬಂದು 20 ದಿನವಾಗಿದೆ ಅಷ್ಟೇ. ಅವರು ಸ್ವಲ್ಪ ಸಮಾಧಾನವಾಗಿರುವುದು ಒಳ್ಳೆಯದು ಎಂದರು.
ಸುರ್ಜೇವಾಲ ಅವರು ಅಧಿಕಾರಿಗಳ ಸಭೆ ನಡೆಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಅದು ಅಧಿಕೃತ ಸಭೆ ಆಗಿರಲಿಲ್ಲ. ಡಿಸಿಎಂ ಡಿ.ಕೆ. ಶಿವಕುಮಾರ್ ಸಭೆ ನಡೆಸಿದ್ದರು. ಆ ವೇಳೆ ರಣದೀಪ್ ಸಿಂಗ್ ಸುರ್ಜೇವಾಲ ಬಂದಿದ್ದಾರೆ ಅಷ್ಟೇ. ವಿಧಾನಸೌಧದೊಳಗೆ ಸಭೆ ಮಾಡಿದ್ರೆ ತಪ್ಪು. ಖಾಸಗಿ ಹೋಟೆಲ್ನಲ್ಲಿ ಡಿ.ಕೆ. ಶಿವಕುಮಾರ್ ಸಭೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ಸುರ್ಜೇವಾಲ ಬಂದಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿಲ್ಲ. ಬೇಕಿದ್ದರೆ ಬಿಜೆಪಿಯವರು ದೂರು ನೀಡಲಿ. ರಾಜಭವನದವರು ಪರಿಶೀಲನೆ ಮಾಡ್ತಾರೆ ಎಂದು ಹೇಳಿದರು.
ದಲಿತ ಸಿಎಂ ವಿಚಾರದಲ್ಲಿ ನೀವು ಬಹಳ ಡೀಪ್ ಆಗಿ ಹೋಗುವ ಅಗತ್ಯವಿಲ್ಲ. ನಮ್ಮ ಸಮುದಾಯಕ್ಕೆ ಧೈರ್ಯ ತುಂಬುವ ನಿಟ್ಟಿನಲ್ಲಿ ಮಾತನಾಡಿದ್ದೇನೆ. ನಾಳೆಯೇ ಹೋಗಿ ಸಿಎಂ ಆಗಬೇಕು ಅಂತ ನಾವು ಕೇಳಲ್ಲ. ಯಾವುದೇ ಗೊಂದಲದ ಮಾತುಗಳು ಅದರಲ್ಲಿಲ್ಲ ಎಂದು ತಿಳಿಸಿದರು.