Home ಟಾಪ್ ಸುದ್ದಿಗಳು ಮಂಗಳೂರಿನಲ್ಲಿ ಜನವರಿ 29 ರಂದು ಬಿಲ್ಲವ ಸಮಾವೇಶ

ಮಂಗಳೂರಿನಲ್ಲಿ ಜನವರಿ 29 ರಂದು ಬಿಲ್ಲವ ಸಮಾವೇಶ

ಮಂಗಳೂರು: ಕೇಂದ್ರ ಮಾಜಿ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ, ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ , ಜನವರಿ 29 ರಂದು ನಗರದಲ್ಲಿ ಬಿಲ್ಲವ ಸಮಾವೇಶ ನಡೆಯಲಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರು ವಿಚಾರ ವೇದಿಕೆ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದ್ದಾರೆ.

ಮಂಗಳವಾರ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಸಮಾಜದ ಪ್ರಮುಖರು ಸಭೆ ನಡೆಸಿದ್ದು, 2019ರಲ್ಲಿ ಬ್ರಹ್ಮಾವರದಲ್ಲಿ ನಡೆದಿದ್ದ ಬಿಲ್ಲವರ ಸಮಾವೇಶದ ಪ್ರಮುಖ ಬೇಡಿಕೆಯನ್ನು ಸರಕಾರ ಇನ್ನೂ ಈಡೇರಿಸಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಮಂಗಳೂರಿನಲ್ಲಿ 1 ಲಕ್ಷಕ್ಕೂ ಹೆಚ್ಚು ಜನರನ್ನು ಸೇರಿಸಿ ಸಮಾವೇಶವನ್ನು ನಡೆಸಲು ಬಿಲ್ಲವ ಸಮಾಜದ ಪ್ರಮುಖರು ಸಿದ್ಧತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತಾಡಿದ ಸತ್ಯಜಿತ್, ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಬಿಲ್ಲವರ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಬೇಕು ಎಂಬ ಬೇಡಿಕೆಯನ್ನು ಈಡೇರಿಸಲು ಸರ್ಕಾರ ಮೀನಮೇಷ ಎಣಿಸುತ್ತಿರುವುದು ಬಿಲ್ಲವ ಸಮಾಜದ ಆಕ್ರೋಶಕ್ಕೆ ಕಾರಣವಾಗಿದೆ. ಈಡಿಗ, ಬಿಲ್ಲವ, ತಿಯಾ, ನಾಮಧಾರಿಗಳನ್ನು ಒಳಗೊಂಡ 26 ಪಂಗಡಗಳ ಭಾರಿ ಸಮಾವೇಶವನ್ನು ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ 500ಕ್ಕೂ ಅಧಿಕ ಮುಖಂಡರು ಸೇರಿ ತೀರ್ಮಾನಿಸಿದ್ದೇವೆ. ಸಮಾಜದ ಮುಖಂಡ ಬಿ.ಜನಾರ್ದನ ಪೂಜಾರಿ ಮಾರ್ಗದರ್ಶನದಲ್ಲಿ ಮಂಗಳೂರಿನಲ್ಲಿ 2023ರ ಜ.29ರಂದು ಸಮಾವೇಶ ನಡೆಯಲಿದೆ. ಸ್ಥಳ ಇನ್ನಷ್ಟೇ ನಿಗದಿಯಾಗಬೇಕಿದೆ ಎಂದು ಹೇಳಿದರು.

ಸರ್ಕಾರ , ಕ್ರೈಸ್ತರಿಗೆ 200 ಕೋಟಿ ರೂ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ 1500ರೂ ಕೋಟಿ ಮೀಸಲಿಟ್ಟಿದೆ. ಆದರೆ, ಜನಸಂಖ್ಯೆಯ ಶೇ 35ರಷ್ಟಿರುವ ಹಿಂದುಳಿದ ವರ್ಗಗಳಿಗಾಗಿರುವ ದೇವರಾಜ ಅರಸು ನಿಗಮಕ್ಕೆ ಕೇವಲ 120 ಕೋಟಿರೂ ಅನುದಾನ ನೀಡಲಾಗಿದೆ. ಉನ್ನತ ವಿದ್ಯಾಭ್ಯಾಸಕ್ಕೆ ಬಡ್ಡಿರಹಿತ ಸಾಲ ನೀಡುವುದಕ್ಕೂ ಹಣವಿಲ್ಲದ ಸ್ಥಿತಿ ಈ ನಿಗಮದ್ದು ಎಂದು ಹೇಳಿದ್ದು, ಹಿಂದುಳಿದ ಪ್ರವರ್ಗ 2ಎ ಅಡಿ 108 ಉಪಜಾತಿಗಳಿವೆ. ಪ್ರವರ್ಗ 2ಎಗೆ ಸೇರಲು ಪ್ರಬಲ ಪಂಚಮಸಾಲಿ ಲಿಂಗಾಯಿತ ಸಮಾಜ ಪ್ರಯತ್ನಿಸುತ್ತಿದೆ. ಅವರ ಬೇಡಿಕೆ ಈಡೇರಿದರೆ ಹಿಂದುಳಿದ ವರ್ಗಗಳ ಉಳಿದ ಜಾತಿಗಳಿಗೆ ಉಳಿಗಾಲವಿಲ್ಲ ಎಂದು ಹೇಳಿದರು.

45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಬಿಲ್ಲವ ಹಾಗೂ 26 ಪಂಗಡಗಳ ಸಮಾಜದ ಕಣ್ಣಿಗೆ ಸುಣ್ಣವನ್ನೇ ಹಾಕಲಾಗುತ್ತಿದೆ. ನಾರಾಯಣ ಗುರುಗಳ ಸ್ತಬ್ಧಚಿತ್ರ ದೆಹಲಿಯಲ್ಲಿ ಕೊನೆಗೂ ಪ್ರದರ್ಶನ ಕಾಣಲಿಲ್ಲ. ವಿಮಾನ ನಿಲ್ದಾಣಕ್ಕೆ ಕೋಟಿ ಚೆನ್ನಯರ ಹೆಸರಿಡಬೇಕೆಂಬ ಬೇಡಿಕೆ ಇಟ್ಟರೆ, ಸೈನಿಕರ ತರಬೇತಿ ಶಾಲೆಗೆ ಕೋಟಿ ಚೆನ್ನಯರ ಹೆಸರು ಇಡುತ್ತಾರೆ. ಆ ಶಾಲೆಯಲ್ಲಿ ವರ್ಷಕ್ಕೆ 30 ಮಂದಿಗಷ್ಟೇ ತರಬೇತಿ ನೀಡಬಹುದು. ನಾರಯಣ ಗುರು ಹೆಸರಿನಲ್ಲಿ ಸ್ಥಾಪಿಸಿದ ವಸತಿ ಶಾಲೆಯಲ್ಲಿ 100 ವಿದ್ಯಾರ್ಥಿಗಳೂ ಇಲ್ಲ. ಈ ಶಾಲೆಯಿಂದ ಸಮಾಜಕ್ಕೆ ನಯಾಪೈಸೆ ಉಪಯೋಗವೂ ಇಲ್ಲ ಎಂದು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ, ಬಿಲ್ಲವ ಮಹಾಮಂಡಲದ ಅಧ್ಯಕ್ಷ ರಾಜಶೇಖರ ಕೋಟ್ಯಾನ್, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಹಾಗೂ ಬಿಲ್ಲವ ಸಮಾಜ ಪ್ರಮುಖರು ಉಪಸ್ಥಿತದ್ದರು.

Join Whatsapp
Exit mobile version