Home ಟಾಪ್ ಸುದ್ದಿಗಳು ಜಪ್ತಿ ಮಾಡಲಾದ ಮದ್ಯ ಬಾಟಲಿಗಳಿಂದ ಬಳೆ ತಯಾರಿಸಲಿರುವ ಬಿಹಾರ ಸರ್ಕಾರ

ಜಪ್ತಿ ಮಾಡಲಾದ ಮದ್ಯ ಬಾಟಲಿಗಳಿಂದ ಬಳೆ ತಯಾರಿಸಲಿರುವ ಬಿಹಾರ ಸರ್ಕಾರ

ಪಾಟ್ನಾ: ಬಿಹಾರದಲ್ಲಿ ಮದ್ಯ ನಿಷೇಧಕ್ಕೆ ಸಂಬಂಧಿಸಿದಂತೆ ಜಪ್ತಿ ಮಾಡಲಾದ ಮದ್ಯ ಬಾಟಲಿಗಳಿಂದ ಬಳೆಗಳನ್ನು ತಯಾರಿಸುವ ಮೂಲಕ ಗ್ರಾಮೀಣ ಮಹಿಳೆಯರಿಗೆ ಉದ್ಯೋಗ ಕಲ್ಪಿಸಲು ಸರಕಾರವು ನಿರ್ಧರಿಸಿದೆ. ಈ ಮೂಲಕ ಮಹಿಳೆಯರಿಗೆ ಜೀವನೋಪಾಯವನ್ನು ಒದಗಿಸುವುದರೊಂದಿಗೆ ತ್ಯಾಜ್ಯವನ್ನು ಕಡಿಮೆ ಮಾಡುವ ವಿನೂತನ ಪ್ರಯತ್ನಕ್ಕೆ ಮುಂದಾಗಿದೆ.

ಗ್ರಾಮೀಣ ಮಹಿಳೆಯರಿಗೆ ಜೀವಿಕಾ (JEEVIKA) ಯೋಜನೆಯಡಿ ಬಳೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರದ ಮದ್ಯಪಾನ ತಡೆ ಇಲಾಖೆಯು ₹1 ಕೋಟಿ ಅನುದಾನವನ್ನು ಮಂಜೂರು ಮಾಡಿದೆ.

ರಾಜ್ಯದಲ್ಲಿ ಪ್ರತಿ ವರ್ಷ ದೊಡ್ಡ ಪ್ರಮಾಣದಲ್ಲಿ  ಮದ್ಯವನ್ನು ವಶಪಡಿಸಿಕೊಳ್ಳಲಾಗುತ್ತಿದ್ದು, ಮುಟ್ಟುಗೋಲು ಹಾಕಿದ ಬಾಟಲಿಗಳನ್ನು ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಕಷ್ಟವಾಗುತ್ತದೆ ಎಂದು ಮದ್ಯಪಾನ ತಡೆ ಮತ್ತು ಅಬಕಾರಿ ಸಚಿವ ಸುನೀಲ್ ಕುಮಾರ್ ಹೇಳಿದ್ದಾರೆ.

ವಶಪಡಿಸಿಕೊಳ್ಳಲಾದ ಮದ್ಯದ ಬಾಟಲಿಗಳನ್ನು ಬುಲ್ಡೋಜರ್ ಬಳಸಿ ಪುಡಿಮಾಡಲಾಗುತ್ತದೆ, ಇದರ ಪರಿಣಾಮವಾಗಿ ಬೃಹತ್ ತ್ಯಾಜ್ಯ ಉಂಟಾಗುತ್ತದೆ. ಇಲಾಖೆ ಈಗ ಗಾಜಿನ ಬಳೆಗಳನ್ನು ತಯಾರಿಸಲು ಜೀವಿಕಾ  ಕಾರ್ಮಿಕರಿಗೆ ಪುಡಿಮಾಡಿದ ಬಾಟಲಿಗಳನ್ನು ಕಚ್ಚಾ ವಸ್ತುಗಳಾಗಿ ಒದಗಿಸುತ್ತದೆ. ಗಾಜಿನ ಬಳೆಗಳನ್ನು ತಯಾರಿಸಲು ಜೀವಿಕಾ ಕಾರ್ಯಕರ್ತರ ಗುಂಪಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ತರಬೇತಿ ಕೂಡ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಬಿಹಾರದಲ್ಲಿ 2016ರ ಏಪ್ರಿಲ್ನಲ್ಲಿ ಮದ್ಯವನ್ನು ನಿಷೇಧ ಮಾಡಲಾಗಿದೆ. ಮದ್ಯ ಸೇವನೆ, ಶೇಖರಣೆ, ಮಾರಾಟ ಮತ್ತು ಉತ್ಪಾದನೆ ಶಿಕ್ಷಾರ್ಹ ಅಪರಾಧವಾಗಿದೆ.

Join Whatsapp
Exit mobile version