ಬಿಹಾರ ಮತ ಎಣಿಕೆ | ಯಾವ ಕ್ಷಣದಲ್ಲಾದರೂ ಫಲಿತಾಂಶದ ದಿಕ್ಕು ಬದಲಾಗಬಹುದು!

Prasthutha|

ಪಾಟ್ನಾ : ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳ ಪ್ರಕಾರ, ಜೆಡಿಯು ನೇತೃತ್ವದ ಎನ್ ಡಿಎ ಮುನ್ನಡೆಯಲ್ಲಿದೆಯಾದರೂ, ಇದು ಯಾವ ಕ್ಷಣದಲ್ಲಾದರೂ ಬದಲಾಗುವ ಸಾಧ್ಯತೆಗಳಿವೆ ಎಂದೂ ಹೇಳಲಾಗುತ್ತಿದೆ.

ಬಹುಮತ ಪಡೆಯಲು 122 ಸ್ಥಾನಗಳ ಅಗತ್ಯವಿದ್ದು, ಅದ್ಯಕ್ಕೆ ಎನ್ ಡಿಎ ಮೈತ್ರಿಕೂಟ 127ರ ಗಡಿಯಲ್ಲಿದ್ದು, ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಲಕ್ಷಣಗಳು ಕಾಣುತ್ತಿವೆ. ಆದರೆ, ಚುನಾವಣಾ ಆಯೋಗವು ಮಧ್ಯಾಹ್ನ ನಡೆಸಿರುವ ಪತ್ರಿಕಾಗೋಷ್ಟಿಯಲ್ಲಿ, 166 ಕ್ಷೇತ್ರಗಳಲ್ಲಿ 5,000ಕ್ಕೂ ಕಡಿಮೆ ಅಂತರದ ಮುನ್ನಡೆಯಿದೆ ಎಂದು ತಿಳಿಸಿದೆ.

- Advertisement -

ಕೇವಲ ಶೇ.20ರಷ್ಟು ಮತಗಳು ಮಾತ್ರ ಎಣಿಕೆಯಾಗಿದೆ, ಮತ ಎಣಿಕೆ ಮತ್ತು ಫಲಿತಾಂಶ ಘೋಷಣೆ ತಡರಾತ್ರಿ ವರೆಗೂ ಮುಂದುವರಿಯಬಹುದು ಎಂದು ಆಯೋಗವು ತಿಳಿಸಿದೆ. ಆದರೆ, ಇಲ್ಲಿ ಗಮನಿಸಬೇಕಾದ ಮಹತ್ವದ ಅಂಶ ಮುನ್ನಡೆ ಅಂತರ. ಸುಮಾರು 166 ಕ್ಷೇತ್ರಗಳಲ್ಲಿ ಮುನ್ನಡೆ ಅಂತರ 5,000ಕ್ಕೂ ಕಡಿಮೆ ಇದೆ ಎಂದರೆ, ಆ ಫಲಿತಾಂಶ ಯಾವಾಗ ಬೇಕಾದರೂ, ಬದಲಾವಣೆಯ ದಿಕ್ಕಿನಲ್ಲಿ ಸಾಗಬಹುದು.

ಇನ್ನೂ ದೊಡ್ಡ ಪ್ರಮಾಣದ ಮತ ಎಣಿಕೆ ಬಾಕಿಯಿರುವುದರಿಂದ, ಅಂತಿಮ ಫಲಿತಾಂಶದ ದಿಕ್ಸೂಚಿಯನ್ನು ಈಗಲೇ ಊಹಿಸುವುದು ಅಸಾಧ್ಯ ಎಂದು ರಾಜಕೀಯ ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.

ಸಿಕ್ಕಿರುವ ಇನ್ನೊಂದು ಮಾಹಿತಿ ಪ್ರಕಾರ, ಸುಮಾರು 74 ಸೀಟುಗಳಲ್ಲಿ 1,000ಕ್ಕಿಂತಲೂ ಕಡಿಮೆ ಅಂತರದ ಮುನ್ನಡೆಯಿದೆ. 42 ಸೀಟುಗಳಲ್ಲಿ 500ಕ್ಕಿಂತಲೂ ಕಡಿಮೆ ಅಂತರದ ಮುನ್ನಡೆಯಿದೆ. ಈ ಮುನ್ನಡೆಯ ಮಾಹಿತಿ, ಅಂತಿಮ ಫಲಿತಾಂಶದ ವೇಳೆಗೆ ಮಹತ್ವದ ಬದಲಾವಣೆಗೆ ಕಾರಣವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.

- Advertisement -