ಬಳಕೆದಾರರಿಗೆ ಬಿಗ್ ಶಾಕ್ ನೀಡಿದ ಫೋನ್ ಪೇ: 50 ರೂ.ಗಿಂತ ಹೆಚ್ಚಿನ ಪಾವತಿಗೆ ಶುಲ್ಕ !

Prasthutha|

ನವದೆಹಲಿ: ಭಾರತದ ಜನಪ್ರಿಯ ಡಿಜಿಟಲ್ ನಗದು ಪಾವತಿ ಅಪ್ಲಿಕೇಶನ್‌ ಗಳಲ್ಲಿ ಒಂದಾದ ಫೋನ್‌ ಪೇ ಇದೀಗ ತನ್ನ ಬಳಕೆದಾರರಿಗೆ ಬಿಗ್ ಶಾಕ್‌  ನೀಡಿದೆ.

- Advertisement -

ಡಿಜಿಟಲ್ ಪಾವತಿಗಳ ನಾಯಕನಾಗಿ ಬೆಳೆದು ನಿಂತ ನಂತರ, ತನ್ನ ಪೋನ್ ಪೇ ಅಪ್ಲಿಕೇಷನ್‌ ನಲ್ಲಿ 50 ರೂ.ಗಿಂತ ಹೆಚ್ಚಿನ ಫೋನ್ ರೀಚಾರ್ಜ್‌ ಗಳ ಮೇಲೆ 1 ರಿಂದ 2 ರೂಗಳ ಪ್ರೊಸೆಸಿಂಗ್ ಶುಲ್ಕವನ್ನು ವಿಧಿಸಲು ಆರಂಭಿಸಿದೆ. ಕಡಿಮೆ ಸಂಖ್ಯೆಯ ಬಳಕೆದಾರರೊಂದಿಗೆ ಇದನ್ನು ಪ್ರಾಯೋಗಿಕ ಆಧಾರದ ಮೇಲೆ ಮಾಡಲಾಗುತ್ತಿದೆ ಎಂದು ಕಂಪನಿಯ ವಕ್ತಾರರು ತಿಳಿಸಿದ್ದು, 50 ರಿಂದ 100 ರೂ.ವರೆಗಿನ ರೀಚಾರ್ಜ್‌ ಗಳಿಗೆ 1 ರೂ. ಶುಲ್ಕ ಮತ್ತು 100 ರೂ.ಗಿಂತ ಹೆಚ್ಚಿನದಕ್ಕೆ 2 ರೂ.ಶುಲ್ಕವನ್ನು ವಿಧಿಸುವುದಾಗಿ ತಿಳಿಸಿದೆ.

ಫೋನ್ ಪೇ ಮೂಲಕ ರೀಚಾರ್ಜ್‌ ಮಾಡುವವರಿಗೆ ಶುಲ್ಕ ವಿಧಿಸುವ ಸಣ್ಣ ಪ್ರಮಾಣದ ಪ್ರಯೋಗ ಇದಾಗಿದ್ದು, ಇದರಲ್ಲಿ ಕೆಲವು ಬಳಕೆದಾರರು ಮೊಬೈಲ್ ರೀಚಾರ್ಜ್‌ ಗಳಿಗೆ ಚಾರ್ಜಿಂಗ್‌ ಶುಲ್ಕ ಪಾವತಿಸಬೇಕಿದೆ ಎಂದು ಫೋನ್‌ ಪೇ ಹೇಳಿಕೊಂಡಿದೆ. ಅಂದರೆ, ಅದು ನಿಮ್ಮ ಖಾತೆಯು ಪ್ರಾಯೋಗಿಕ ಗುಂಪಿನ ಅಡಿಯಲ್ಲಿ ಬರುತ್ತದೆಯೇ ಎಂಬುದನ್ನು ಅವಲಂಬಿಸಿರುತ್ತದೆ. ಈ ಪ್ರಯೋಗ ಯಶಸ್ವಿಯಾದರೆ ಶೀಘ್ರದಲ್ಲೇ ಫೋನ್‌ ಪೇ ಬಳಕೆದಾರರ ಜೇಬಿಗೆ ಕತ್ತರಿ ಬೀಳಲಿದೆ. ಇನ್ನು ಫೋನ್‌ ಪೇ ಎಲ್ಲಾ ಇತರ ಪಾವತಿ ಸೇವೆಗಳ ಮಾದರಿಯಲ್ಲಿಯೇ ಕ್ರೆಡಿಟ್ ಕಾರ್ಡ್‌ ಗಳ ಮೂಲಕ ಮಾಡಿದನು ಎಲ್ಲಾ ವಹಿವಾಟುಗಳಿಗೆ ಶುಲ್ಕ ವಿಧಿಸುತ್ತಿದೆ. ಆದರೆ ಇತರೆ ಪಾವತಿ ಸೇವೆಗಳಿಗೆ ಯಾವುದೇ ರೀತಿಯ ಶುಲ್ಕ ವಿಧಿಸುವುದಿಲ್ಲ ಎಂದು ಫೋನ್‌ ಪೇ ಹೇಳಿದೆ.

Join Whatsapp