ಬೀದರ್: ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ (ಜೆಡಿಎಸ್) ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಬಂಡೆಪ್ಪ ಖಾಶೆಂಪುರ್ ಮಂಗಳವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆಗೂ ಮುನ್ನ ಅವರು ಬೀದರ್ ದಕ್ಷಿಣ ಕ್ಷೇತ್ರದ ಖಾಶೆಂಪುರ್ ಪಿ ಗ್ರಾಮದ ಮರಿಗೆಮ್ಮಾ ದೇವಿ ಮಂದಿರ, ಭಾಲ್ಕಿ ತಾಲೂಕಿನ ಖಾನಾಪೂರದ ಶ್ರೀಕ್ಷೇತ್ರ ಮೈಲಾರ ಮಲ್ಲಣ್ಣ (ಖಂಡೋಬಾ) ದೇವಸ್ಥಾನ, ಶ್ರೀ ಘೃತಮಾರಿ (ಗುರುತ ಮಲ್ಲಮ್ಮ) ದೇವಿಯ ದೇವಸ್ಥಾನ, ತೆಲಂಗಾಣ ರಾಜ್ಯದ ರೆಜಿಂತಲ್ ನ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನ, ಬೀದರ್ ನ ಸನಾತನ ಹನುಮಾನ್ ಮಂದಿರ, ಭವಾನಿ ಮಂದಿರ, ನಗರದ ಮಂಗಳಪೇಟ್ ನ ಶ್ರೀ ಭವಾನಿ ಮಾತೆಯ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಿಗೆ ಕುಟುಂಬ ಸಮೇತವಾಗಿ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಬೀದರ್ ನಗರದ ಶಾಸಕರ ನಿವಾಸದಿಂದ ಪಾದಯಾತ್ರೆ ಆರಂಭ:
ಬಂಡೆಪ್ಪ ಖಾಶೆಂಪುರ್ ಮಂಗಳವಾರ ಬೆಳಗ್ಗೆ ಬೀದರ್ ನಗರದ ಒಲ್ಡ್ ಸಿಟಿ (ಹಳೆ ಸರ್ಕಾರಿ ಆಸ್ಪತ್ರೆ ಹತ್ತಿರ) ಯಲ್ಲಿರುವ ತಮ್ಮ ನಿವಾಸದಿಂದ ಪಾದಯಾತ್ರೆ ಆರಂಭಿಸಿದರು. ಪಕ್ಷದ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳು, ಬೆಂಬಲಿಗರು ಬೃಹತ್ ಸಂಖ್ಯೆಯಲ್ಲಿ ಸೇರಿ ಶಾಸಕರೊಂದಿಗೆ ಹೆಜ್ಜೆ ಹಾಕಿದರು. ಇದೇ ವೇಳೆ ಒಲ್ಡ್ ಸಿಟಿಯ ರಾಮಮಂದಿರ, ಭವಾನಿ ಮಂದಿರಗಳಿಗೆ ತೆರಳಿ ದರ್ಶನ ಪಡೆದು, ದರಗಹ ಮುಲಾನಿ ಬಾದ ಷಾ (ಒಲ್ಡ್ ಸಿಟಿಯ ದರ್ಗಾ) ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಡೊಳ್ಳು, ಹಲಗೆ, ಬಾಜಾ – ಭಜಂತ್ರಿಗಳೊಂದಿಗೆ ಹೆಜ್ಜೆ:
ಬಂಡೆಪ್ಪ ಖಾಶೆಂಪುರ್ ಅವರ ನಾಮಪತ್ರ ಸಲ್ಲಿಕೆಯ ಪಾದಯಾತ್ರೆಯೊಂದಿಗೆ ಡೊಳ್ಳು, ಹಲಗೆ, ಬಾಜಾ – ಭಜಂತ್ರಿ ಸೇರಿದಂತೆ ಮುಂತಾದ ವಾದ್ಯ ಮೇಳಗಳು ರಸ್ತೆಯೂದ್ದಕ್ಕೂ ಸದ್ದು ಮಾಡಿದವು. ಬೃಹತ್ ಸಂಖ್ಯೆಯಲ್ಲಿ ಸೇರಿದ್ದ ಶಾಸಕರ ಅಭಿಮಾನಿಗಳು, ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಸಿಳ್ಳೆ, ಕೇಕೆಗಳೊಂದಿಗೆ ಸಾಗಿದರು.
ನಗರದ ಒಲ್ಡ್ ಸಿಟಿ, ಅಂಬೇಡ್ಕರ್ ಸರ್ಕಲ್, ಭಗತ್ ಸಿಂಗ್ ಸರ್ಕಲ್ ಸೇರಿದಂತೆ ವಿವಿಧ ವೃತ್ತಗಳೊಂದಿಗೆ ಸಾಗಿಬಂದ ನಾಮಪತ್ರ ಸಲ್ಲಿಕೆಯ ಯಾತ್ರೆ ತಹಶಿಲ್ದಾರರ ಕಛೇರಿಗೆ ತಲುಪಿತು.
ಚುನಾವಣಾಧಿಕಾರಿಗೆ ನಾಮಪತ್ರ ಒಪ್ಪಿಸಿದ ಬಂಡೆಪ್ಪ ಖಾಶೆಂಪುರ್:
ಸಡಗರ, ಸಂಭ್ರಮ, ಹರ್ಷೋದ್ಗಾರಗಳೊಂದಿಗೆ ಅದ್ದೂರಿ ಪಾದಯಾತ್ರೆ ನಡೆಸಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ನಗರದ ತಹಶಿಲ್ದಾರರ ಕಛೇರಿಗೆ ಭೇಟಿ ನೀಡಿ ಅಲ್ಲಿದ್ದ ಚುನಾವಣಾಧಿಕಾರಿಗಳಿಗೆ ನಾಮಪತ್ರ ಒಪ್ಪಿಸಿದರು. ನಾಮಪತ್ರ ಸಲ್ಲಿಕೆಯ ವೇಳೆ ಶಾಸಕರೊಂದಿಗೆ ಬೀದರ್ ಉತ್ತರ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸೂರ್ಯಕಾಂತ್ ನಾಗಮಾರಪಳ್ಳಿ, ಪ್ರಮುಖರಾದ ರಾಜು ಕಡ್ಯಾಳ, ಕಿರಾಣ್ ಚಂದಾ ಇದ್ದರು.