Home ಟಾಪ್ ಸುದ್ದಿಗಳು ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಗೆ ಜಾಮೀನು

ಭೀಮಾ ಕೋರೆಗಾಂವ್ ಪ್ರಕರಣ: ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಗೆ ಜಾಮೀನು

ಮುಂಬೈ, ಜು.30: ಭೀಮಾ ಕೋರೆಗಾಂವ್ ಪ್ರಕರಣ ಆರೋಪಿ, ಸಾಮಾಜಿಕ ಹೋರಾಟಗಾರ ಸುರೇಂದ್ರ ಗಾಡ್ಲಿಂಗ್ ಅವರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ನೀಡಿದೆ.

ಸುರೇಂದ್ರ ಅವರ ಅಗಲಿರುವ ತಾಯಿಯ ವಾರ್ಷಿಕ ಕ್ರಿಯಾವಿಧಿಗಳ ಕರ್ತವ್ಯಗಳಲ್ಲಿ ಕುಟುಂಬದೊಂದಿಗೆ ಪಾಲ್ಗೊಳ್ಳಲು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಆಗಸ್ಟ್ 15ರಂದು ತನ್ನ ತಾಯಿಯ ಮೊದಲ ವರ್ಷದ ಪುಣ್ಯತಿಥಿಯ ಕೆಲವು ಆಚರಣೆಗಳಲ್ಲಿ ಪಾಲ್ಗೊಳ್ಳಲು ತಾತ್ಕಾಲಿಕ ಜಾಮೀನು ನೀಡುವಂತೆ ಬಾಂಬೆ ಹೈಕೋರ್ಟ್ಗೆ ಸುರೇಂದ್ರ ಇತ್ತೀಚೆಗೆ ಅರ್ಜಿ ಸಲ್ಲಿಸಿದ್ದರು.

ಹಿರಿಯ ವಕೀಲರಾದ ಇಂದಿರಾ ಜೈಸಿಂಗ್ ಮತ್ತು ವಕೀಲ ಆರ್. ಸತ್ಯನಾರಾಯಣ್ ಅವರ ಮೂಲಕ ಸಲ್ಲಿಸಿದ ಮನವಿಯಲ್ಲಿ, 2020ರ ವಿಶೇಷ ನ್ಯಾಯಾಲಯ, ತನ್ನ ತಾಯಿಯ ಕೊನೆಯ ವಿಧಿವಿಧಾನಗಳಲ್ಲಿ ಹಾಜರಾಗಲು ತಾತ್ಕಾಲಿಕ ಜಾಮೀನು ನೀಡುವ ಮನವಿಯನ್ನು ತಿರಸ್ಕರಿಸಿದ್ದ ಆದೇಶವನ್ನು ಪ್ರಶ್ನಿಸಿದ್ದರು. ಜಾಮೀನು ಕೋರಿ ಗಾಡ್ಲಿಂಗ್ ಕಳೆದ ವರ್ಷ ಹೈಕೋರ್ಟ್ ಗೆ ಮೊರೆ ಹೋಗಿದ್ದರು. ಆಗಸ್ಟ್ 15, 2020 ರಂದು ವಕೀಲ ಸುರೇಂದ್ರ ಗಾಡ್ಲಿಂಗ್ ಅವರ ತಾಯಿ ನಾಗ್ಪುರದಲ್ಲಿ ನಿಧನರಾಗಿದ್ದರು.
ಸುರೇಂದ್ರ ಗಾಡ್ಲಿಂಗ್ ಅವರನ್ನು ಪುಣೆ ಪೊಲೀಸರು 2018 ರ ಜೂನ್ನಲ್ಲಿ ಬಂಧಿಸಿದ್ದರು. ಬಳಿಕ ಪ್ರಕರಣವನ್ನು ಎನ್ ಐಎ ವಹಿಸಿಕೊಂಡಿದೆ. ವಿಚಾರಣೆ ಹಂತದಿಂದಲು ಅವರನ್ನು ನವೀ ಮುಂಬೈನ ತಾಲೋಜಾ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ.
ತಾತ್ಕಾಲಿಕ ಜಾಮೀನು ಅರ್ಜಿಯನ್ನು ಮುಂಬೈನ ವಿಶೇಷ ಎನ್ ಐಎ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ತನ್ನ ತಾಯಿಯ ಕೊನೆಯ ವಿಧಿಗಳನ್ನು ನಿರ್ವಹಿಸಲು ಮೂರು ವಾರಗಳ ಕಾಲ ಜೈಲಿನಿಂದ ಬಿಡುಗಡೆಯಾಗಬೇಕೆಂದು ಕೋರಿದ್ದರು, ಆದರೆ ಅವರ ಅರ್ಜಿಯನ್ನು ತಿರಸ್ಕರಿಸಲಾಗಿತ್ತು. ನಂತರ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು, ಅಲ್ಲಿಯೂ ಅವರ ಮನವಿಯನ್ನು ಹಲವಾರು ಬಾರಿ ಮುಂದೂಡಲಾಗಿತ್ತು.

“ತಾಯಿಯ ಅಂತ್ಯಕ್ರಿಯೆಯ ವಿಧಿಗಳನ್ನು ಇಲ್ಲಿಯವರೆಗೆ ನಡೆಸಲಾಗಿಲ್ಲ ಮತ್ತು ಅವುಗಳನ್ನು ಮೊದಲ ಪುಣ್ಯತಿಥಿಯಂದು ಆಗಸ್ಟ್ 15, 2021 ರಂದು ಯೋಜಿಸಲಾಗಿದೆ” ಎಂದು ಇಂದಿರಾ ಜೈಸಿಂಗ್ ಹೈಕೋರ್ಟ್ಗೆ ತಿಳಿಸಿ, ಗಾಡ್ಲಿಂಗ್ ಅವರಿಗೆ ತಾತ್ಕಾಲಿಕ ಜಾಮೀನು ನೀಡುವಂತೆ ಒತ್ತಾಯಿಸಿದ್ದರು.

Join Whatsapp
Exit mobile version