ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತ ಮಹಿಳೆಯ ಅಪಹರಣ ಪ್ರಕರಣದಲ್ಲಿ ಭವಾನಿ ರೇವಣ್ಣಗೆ ಮಂಜೂರು ಮಾಡಿದ್ದ ನಿರೀಕ್ಷಣಾ ಜಾಮೀನು ಅವಧಿಯನ್ನು ಹೈಕೋರ್ಟ್ ವಿಸ್ತರಿಸಿದೆ.
ವಿಚಾರಣೆಯ ಸಂದರ್ಭದಲ್ಲಿ ಭವಾನಿ ರೇವಣ್ಣ ಅವರಿಗೆ ನೀಡಿರುವ ಮಧ್ಯಂತರ ನಿರೀಕ್ಷಣಾ ಜಾಮೀನು ಮುಂದುವರಿಕೆಗೆ ಪ್ರಾಸಿಕ್ಯೂಷನ್ ವಿರೋಧ ವ್ಯಕ್ತಪಡಿಸಿದೆ. ಭವಾನಿ ರೇವಣ್ಣ ತನಿಖೆಗೆ ಸಹಕರಿಸುತ್ತಿಲ್ಲ. ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸದೆ ತನಿಖೆಯ ದಿಕ್ಕು ತಪ್ಪಿಸುತ್ತಿದ್ದಾರೆ. ಹಾಗಾಗಿ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕಿದೆ ಎಂದು ಹೈಕೋರ್ಟ್ ನಲ್ಲಿ ವಿಶೇಷ ಎಸ್.ಪಿ.ಪಿ. ರವಿವರ್ಮಕುಮಾರ್ ವಾದ ಮಂಡಿಸಿದ್ದಾರೆ.
ಕೆಲಕಾಲ ವಿಚಾರಣೆ ನಡೆಸಿದ ನಂತರ ತೀರ್ಪು ಕಾಯ್ದಿರಿಸುವುದಾಗಿ ನ್ಯಾಯಪೀಠ ಪ್ರಕಟಿಸಿದೆ. ಭವಾನಿ ರೇವಣ್ಣ ಪರ ವಕೀಲರು, ಅರ್ಜಿದಾರರು ತನಿಖಾಧಿಕಾರಿಗಳ ಮುಂದೆ ಹಾಜರಾಗುತ್ತಿದ್ದಾರೆ. ತನಿಖೆಗೆ ಸಹಕಾರ ನೀಡುತ್ತಿದ್ದು, ಅವರ ಬಂಧನ ಅಗತ್ಯವಿಲ್ಲ ಎಂದು ವಿವರಿಸಿದ್ದಾರೆ.