ಚಾಮರಾಜನಗರ: ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸಿದ್ದು, ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಬಂಡೀಪುರದ ಬಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಅನೇಕ ಗಣ್ಯರು ಭವ್ಯ ಸ್ವಾಗತ ಕೋರಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ರಾಜ್ಯ ಪ್ರವೇಶಿಸಿದೆ. ತಮಿಳುನಾಡಿನ ಮೂಲಕ ಕರ್ನಾಟಕದ ಗುಂಡ್ಲುಪೇಟೆಗೆ ಶುಕ್ರವಾರ ಬೆಳಗ್ಗೆ ಆಗಮಿಸಿರುವ ರಾಹುಲ್ ಗಾಂಧಿ ಅವರನ್ನು ಬಂಡೀಪುರದ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕೆಕ್ಕನಳ್ಳ ಕಾಡಿನ ದಾರಿಯಲ್ಲೇ ನಿಂತು ಸಿದ್ದರಾಮಯ್ಯ ಮತ್ತು ಇತರ ಗಣ್ಯರು ಬರ ಮಾಡಿಕೊಂಡರು
ಈ ಸಮಯದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಮಾಜಿ ಸಚಿವರಾದ ಕೆ.ಜೆ. ಜಾರ್ಜ್, ಡಾ. ಎಚ್.ಸಿ. ಮಹಾದೇವಪ್ಪ, ವಿಧಾನ ಪರಿಷತ್ ನ ವಿರೋಧ ಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಸೇರಿದಂತೆ ಅನೇಕ ಗಣ್ಯರು ಹಾಜರಿದ್ದರು.
ಎರಡು ದಿನಗಳ ಕಾಲ ಚಾಮರಾಜನಗರ ಜಿಲ್ಲೆಯಲ್ಲಿ ನಡೆಯಲಿರುವ ಭಾರತ್ ಜೋಡೋ ಯಾತ್ರೆ ಹಿನ್ನೆಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮವಾಗಿ ಎಸ್ಪಿ ಶಿವಕುಮಾರ್ ನೇತೃತ್ವದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.
ಗುಂಡ್ಲುಪೇಟೆ ಮೂಲಕ ಚಾಮರಾಜನಗರ ಪ್ರವೇಶಿಸಿರುವ ಯಾತ್ರೆ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು ಜಿಲ್ಲೆಗಳಲ್ಲಿ 21 ದಿನಗಳ 511 ಕಿ.ಮೀ. ಕ್ರಮಿಸಲಿದೆ.