ಚಂಡೀಗಢ: ಇತ್ತೀಚೆಗೆ ಮುಕ್ತಾಯಗೊಂಡ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) ದೊಡ್ಡ ಪಾತ್ರ ವಹಿಸಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಮಾನ್ “ರಾಹುಲ್ ಗಾಂಧಿ ಎಷ್ಟು ಬಾರಿ ಗುಜರಾತ್ ಗೆ ಭೇಟಿ ನೀಡಿದ್ದರು. ಒಂದೇ ಒಂದು ಭೇಟಿಯೊಂದಿಗೆ ಅವರು ಚುನಾವಣೆಯನ್ನು ಗೆಲ್ಲಲು ಬಯಸಿದ್ದಾರೆ ಎಂದು ಕಿಡಿಕಾರಿದರು.
ಸೂರ್ಯ ಅಸ್ತಮಿಸುವ ಸ್ಥಳದಲ್ಲಿ (ಗುಜರಾತ್) ಚುನಾವಣೆಗಳು ನಡೆದವು. ಆದರೆ ರಾಹುಲ್ ಗಾಂಧಿ ಸೂರ್ಯ ಮೊದಲು ಉದಯಿಸುವ ಸ್ಥಳದಿಂದ (ಕನ್ಯಾಕುಮಾರಿ) ತಮ್ಮ ‘ಪಾದಯಾತ್ರೆ’ಯನ್ನು ಪ್ರಾರಂಭಿಸಿದರು. ಅವರು ಮೊದಲು ತಮ್ಮ ಸಮಯವನ್ನು ಸರಿಪಡಿಸಿಕೊಳ್ಳಲಿ ಎಂದರು.
ಕಾಂಗ್ರೆಸ್ ಶಾಸಕರು ಪ್ರತಿಸ್ಪರ್ಧಿ ಪಕ್ಷಗಳಿಗೆ ನುಸುಳುತ್ತಿದ್ದಾರೆ ಎಂದು ಆರೋಪಿಸಿರುವ ಅವರು, ಪಕ್ಷವು ಎಷ್ಟು ಬಡವಾಗಿದೆಯೆಂದರೆ ಅದು ತನ್ನ ಶಾಸಕರನ್ನು ಪ್ರತಿಸ್ಪರ್ಧಿ ಪಕ್ಷಗಳಿಗೆ ಮಾರಾಟ ಮಾಡಿ ಸಂಖ್ಯಾಬಲದ ಕೊರತೆಯನ್ನು ಮುಂದಿಟ್ಟುಕೊಂಡು ಸರ್ಕಾರ ರಚಿಸಲು ಪ್ರಯತ್ನಿಸುತ್ತಿದೆ. ಪಕ್ಷವು ಕೋಮಾದಲ್ಲಿದೆ ಎಂದು ಮಾನ್ ಹೇಳಿದರು.
ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸಿದೆ. ಆದರೆ ಪ್ರಸ್ತುತ ಬಿಜೆಪಿ ಎರಡೂ ರಾಜ್ಯಗಳನ್ನು ಆಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.
ಎಎಪಿಯನ್ನು ಪ್ರಾಕ್ಸಿಯಾಗಿ ನಿಲ್ಲಿಸದಿದ್ದರೆ ಗುಜರಾತ್ ನಲ್ಲಿ ಕಾಂಗ್ರೆಸ್ ಗೆಲ್ಲುತ್ತಿತ್ತು ಎಂದು ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರ 100 ಪೂರೈಸಿದ ಸಂದರ್ಭದಲ್ಲಿ ಹೇಳಿದ್ದರು.