ಚಂಡೀಗಡ: ಪಂಜಾಬಿನ ಆಮ್ ಆದ್ಮಿ ಪಕ್ಷದ ಶಾಸಕಾಂಗ ಪಕ್ಷದ ನಾಯಕ ಭಗವಂತ್ ಮಾನ್ ಅವರು ಮಾರ್ಚ್ 12ರ ಶನಿವಾರ ಬೆಳಿಗ್ಗೆ ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತರನ್ನು ಭೇಟಿ ಮಾಡಿ ಸರಕಾರ ರಚನೆಯ ಹಕ್ಕನ್ನು ಮಂಡಿಸಿದರು.
ಇದೇ 16ನೇ ತಾರೀಕು ಕ್ರಾಂತಿಕಾರಿ ಭಗತ್ ಸಿಂಗ್ ರ ಹುಟ್ಟೂರಾದ ಕಟ್ಕರ್ ಕಲನ್ ನಲ್ಲಿ ಮಧ್ಯಾಹ್ನ 12.30 ಗಂಟೆಗೆ ಭಗವಂತ್ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವರು. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಭಗವಂತ್ ಅಂದು ಕಟ್ಕರ್ ಕಲನ್ ಗೆ ಬಂದು ಪ್ರಮಾಣವಚನ ಬೋಧಿಸುವಂತೆ ಕೇಳಿಕೊಂಡರು.
ರಾಜ್ಯಪಾಲರಿಗೆ ಬೆಂಬಲಿಗ ಶಾಸಕರ ಪಟ್ಟಿ ನೀಡಿದ ಭಗವಂತ್ ಇದು ಭಗತ್ ಸಿಂಗ್ ರಿಗೆ ಗೌರವಾರ್ಪಣೆಯ ಕಾರ್ಯಕ್ರಮವೂ ಆಗಲಿದೆ. ಸಂಪೂರ್ಣ ಭಿನ್ನ ಆಡಳಿತವನ್ನು ಎಎಪಿ ನೀಡಲಿದೆ ಎಂದು ರಾಜಭವನದಿಂದ ಹೊರಬಂದ ಅವರು ಪತ್ರಕರ್ತರಿಗೆ ಹೇಳಿದರು. ಎಷ್ಟು ಜನ ಮಂತ್ರಿಗಳು, ಯಾರ್ಯಾರು ಎನ್ನುವುದು ಇನ್ನೂ ಚರ್ಚೆ ನಡೆದಿದೆ. ನಮ್ಮ ಪಕ್ಷದ ಹಿರಿಯ ನಾಯಕರ ಸಲಹೆಯನ್ನೂ ಪಡೆಯಲಾಗುವುದು ಎಂದು ಅವರು ಹೇಳಿದರು.