ಮಂಗಳೂರು: DYFI ಜಿಲ್ಲಾ ಮುಖಂಡ ಅಶ್ರಫ್ ಕೆ.ಸಿ ರೋಡ್, CPIM ಮುಖಂಡರಾದ ಮೊಯಿದೀನ್ ಕೆ.ಸಿ ರೋಡ್, ಸಾಮಾಜಿಕ ಮುಖಂಡರಾದ ಬಶೀರ್ ಪಿಲಿಕೂರು, ಸತ್ತಾರ್ ಪಿಲಿಕೂರು ಸೇರಿದಂತೆ ವಿವಿಧ ಗಣ್ಯರು ಮತ್ತು ಯುವ ನಾಯಕರು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-ಎಸ್ ಡಿಪಿಐಗೆ ಸೇರ್ಪಡೆಗೊಂಡರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ತಲಪಾಡಿ ಗ್ರಾಮ ಸಮಿತಿ ಅಧ್ಯಕ್ಷ ಇಮ್ರಾನ್ ಪೂಮಣ್ಣು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್ ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿ ಸದಸ್ಯ ರಿಯಾಝ್ ಫರಂಗಿಪೇಟೆಯವರ ನೇತೃತ್ವದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆಯಿತು.
ಪಕ್ಷದ ಸದಸ್ಯತ್ವವನ್ನು ಸ್ವೀಕರಿಸಿ ಮಾತನಾಡಿದ ಅಶ್ರಫ್ ಕೆ.ಸಿ ರೋಡ್ , ಕಳೆದ 70 ವರ್ಷಗಳಲ್ಲಿ ನಮ್ಮನ್ನಾಳಿದ ರಾಜಕೀಯ ಪಕ್ಷಗಳು ಜಾತ್ಯತೀತತೆಯ ನಕಲಿ ಮುಖವಾಡಗಳನ್ನು ಹೊತ್ತುಕೊಂಡು ನಮ್ಮನ್ನು ಮೋಸ ಗೊಳಿಸುತ್ತಾ ಬಂದಿವೆ. ಒಳಗೊಂದು ಹೊರಗೊಂದು ಸಿದ್ಧಾಂತಗಳನ್ನು ಹೊಂದಿರುವ ಇವರಿಂದಾಗಿಯೇ ಇಂದು ದೇಶ ಅಪಾಯಕಾರಿ ಪರಿಸ್ಥಿತಿಗೆ ಬಂದು ತಲುಪಿದೆ. ಸಂಘಪರಿವಾರವನ್ನು ಎದುರಿಸುವ ಸಂದರ್ಭ ಬಂದಾಗಲೆಲ್ಲಾ ಇವರು ಅನುಸರಿಸಿದ ಮೃದು ಧೋರಣೆಯ ಫಲ ಇಂದು ದೇಶದಲ್ಲಿ ಭಯಾನಕತೆ ಮತ್ತು ಹಸಿವಿನ ವಾತಾವರಣ ಸೃಷ್ಟಿಯಾಗಿದೆ ಎಂದು ಹೇಳಿದರು.
ಕೆಂಬಾವುಟದ ವಕ್ತಾರರು ನಡೆಸುವ ಪ್ರತಿಭಟನೆಗಳು ಕೇವಲ ಬೂಟಾಟಿಕೆಯ ಪ್ರದರ್ಶನವಾಗಿದ್ದು ಅದಕ್ಕಿಂತ ಮುಂದುವರಿದ ಯಾವುದೇ ರಾಜಕೀಯ ಚಿಂತನೆಗಳು ಇವರಿಗಿಲ್ಲ, ಇವರು ಮಾಡಿರುವ ಪ್ರತಿಭಟನೆ ಮತ್ತು ಇವರು ಗಳಿಸಿರುವ ಮತಗಳನ್ನು ತುಲನೆ ಮಾಡಿದರೆ ಪ್ರತಿಭಟನೆಗಳ ಸಂಖ್ಯೆ ಜಾಸ್ತಿ ಇವೆ. ಅದೇ ರೀತಿ ಇವರ ವರದಿಗಳ ಪ್ರಕಾರ ಕಾರ್ಯಕರ್ತರ ಸಂಖ್ಯೆ 6000, ಆದರೆ ಮತಗಳಿಕೆ ಕೇವಲ 2000. ಹಾಗಾದರೆ ಇವರು ಒಂದೋ ಕಾರ್ಯಕರ್ತರ ಸಂಖ್ಯೆಯನ್ನು ಜಾಸ್ತಿ ಮಾಡಿ ತೋರಿಸುತ್ತಾರೆ ಅಥವಾ ಇವರ ಕಾರ್ಯಕರ್ತರ ಮತಗಳನ್ನು ಬೇರೆ ಪಕ್ಷಕ್ಕೆ ಮಾರಾಟ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು.
ಇವರು ಹೇಳುವ ಸಿದ್ಧಾಂತಕ್ಕೂ ಕೃತಿಗೂ ಅಜಗಜಾಂತರವಿದೆ, ಸಾವರ್ಕರ್ ರನ್ನು ವಿರೋಧಿಸುತ್ತೇನೆ ಎನ್ನುವ ಇವರು ಕಬಕದ ಸರಕಾರಿ ಕಾರ್ಯಕ್ರಮದಲ್ಲಿ ಅನಧಿಕೃತವಾಗಿ ಸಾವರ್ಕರ್ ಫೋಟೋವನ್ನು ಬಳಸಿರುವುದನ್ನು ಪ್ರತಿಭಟನೆಯ ರೂಪದಲ್ಲಿ ಪ್ರಶ್ನಿಸಿ ತಡೆಹಿಡಿದದ್ದನ್ನು ತಪ್ಪು ಎನ್ನುತ್ತಾರೆ. ಇವರು ಯಾಕಾಗಿ ರಸ್ತೆ ತಡೆ ಪೊಲೀಸ್ ಠಾಣೆ ಮುತ್ತಿಗೆಯಂತಹ ತಡೆಯೊಡ್ಡುವ ಪ್ರತಿಭಟನೆ ಮಾಡಬೇಕು, ಕೇವಲ ಮನವಿ ಪತ್ರ ನೀಡಿದರೆ ಸಾಲದೆ ಎಂದು ಪ್ರಶ್ನಿಸುತ್ತಾರೆ. ಆದರೆ ವಾಸ್ತವದಲ್ಲಿ ಇವರು ಬಾಯಲ್ಲಿ ಭಗತ್ ಸಿಂಗ್ ಮತ್ತು ಆಝಾದ್ ರವರ ಬಗ್ಗೆ ಮಾತನಾಡುತ್ತಾರೆ. ಆದರೆ ಹೃದಯದಲ್ಲಿ ಸಾವರ್ಕರ್ ಮತ್ತು ಗೋಡ್ಸೆಯನ್ನು ನೆನೆಯುತ್ತಾ ರೆ. ಆದ್ದರಿಂದ ಇವರ ದ್ವಿಮುಖ ಧೋರಣೆಯಿಂದ ಬೇಸತ್ತು ರಾಜೀನಾಮೆಯನ್ನು ನೀಡಿ ಎಸ್ ಡಿಪಿಐ ಪಕ್ಷವನ್ನು ಸೇರಿಕೊಂಡಿದ್ದೇನೆ. ಕೇಡರ್ ಬೇಸ್ ವ್ಯವಸ್ಥೆ ಮತ್ತು ಸಾಮೂಹಿಕ ನಾಯಕತ್ವದ ಸೈದ್ಧಾಂತಿಕ ಮೇರು ಪಂಕ್ತಿಯ ಈ ಹೋರಾಟವು ಯಶಸ್ವಿಯಾಗಲು ನಾವೆಲ್ಲರೂ ಜೊತೆಯಾಗಿ ಶ್ರಮಿಸಬೇಕಾಗಿದೆ ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಇಕ್ಬಾಲ್ IMR, ಜಿಲ್ಲಾ ಕಾರ್ಯದರ್ಶಿಗಳಾದ ಅನ್ವರ್ ಸಾದಾತ್, ಅಶ್ರಫ್ ಮಂಚಿ, ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ, ಕಾರ್ಯದರ್ಶಿ ಲತೀಫ್ ಕೋಡಿಜಾಲ್ ಹಾಗೂ ತಲಪಾಡಿ ಗ್ರಾಮ ಪಂಚಾಯತ್ ಸದಸ್ಯರು ಮತ್ತು ಇತರರು ಉಪಸ್ಥಿತರಿದ್ದರು.