ಮಂಡ್ಯ: ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ಬೆಂಗಳೂರು-ಮೈಸೂರು ಎಕ್ಸ್’ಪ್ರೆಸ್ ವೇಯಲ್ಲಿ ಮಂಗಳವಾರದಿಂದ ಟೋಲ್ ವಸೂಲಿ ಆರಂಭಗೊಂಡಿದ್ದು, ಇದರ ಬೆನ್ನಲ್ಲೇ ಸಾರ್ವಜನಿಕರು, ರಾಜಕೀಯ ಪಕ್ಷಗಳು, ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು ಟೋಲ್ ಸಂಗ್ರಹ ವಿರೋಧಿಸಿ ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ಬೆಳಗ್ಗೆಯೇ ಕನ್ನಡಪರ ಸಂಘಟನೆಗಳು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಕಣಮಿಣಿಕೆ ಗ್ರಾಮದ ಟೋಲ್ ಪ್ಲಾಜಾ ಬಳಿ ಜಮಾಯಿಸಿ ಟೋಲ್ ಸಂಗ್ರಹ ನಿಲ್ಲಿಸುವಂತೆ ಒತ್ತಾಯಿಸಿದರು.
ರಸ್ತೆ ಕೆಲಸ ಇನ್ನೂ ಪೂರ್ಣಗೊಂಡಿಲ್ಲ, ಆದರೂ ಟೋಲ್ ಸಂಗ್ರಹ ಆರಂಭಿಸಲಾಗಿದೆ ಎಂದು ಆರೋಪಿಸಿದ ಪ್ರತಿಭಟನಕಾರರು ಶೇಷಗಿರಿಹಳ್ಳಿ ಬಳಿ ವಾಹನ ತಡೆ ನಡೆಸಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಕಾರರ ನಡುವೆ ವಾಗ್ವಾದ ನಡೆಯಿತು. ಈ ವೇಳೆ ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ಪಡೆದು ವಾಹನಗಳಲ್ಲಿ ಕರೆದೊಯ್ದರು.
ಪ್ರಧಾನಿ ನರೇಂದ್ರ ಮೋದಿ ಭಾನುವಾರವಷ್ಟೇ ಬೆಂಗಳೂರು – ಮೈಸೂರು ಎಕ್ಸ್’ಪ್ರೆಸ್’ವೇಯನ್ನು ಉದ್ಘಾಟಿಸಿದ್ದರು.