ಬೆಂಗಳೂರು: ಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ ನಡೆದಿದ್ದು, ಫ್ಲೈಓವರ್ ಮೇಲಿಂದ ಲಾರಿಯಲ್ಲಿದ್ದ ಮರದ ದಿಮ್ಮಿ ಬೈಕ್ ಮೇಲೆ ಬಿದ್ದು ಬೈಕ್ ಸವಾರ ಸಾವನ್ನಪ್ಪಿದ್ದಾನೆ. ಮತ್ತೊಬ್ಬನಿಗೆ ತೀವ್ರ ಗಾಯಗಳಾಗಿವೆ.
ನಾಗರಬಾವಿ ರಿಂಗ್ ರಸ್ತೆಯ ಫ್ಲೈಓವರ್ ಬಳಿ ಈ ಘಟನೆ ನಡೆದಿದ್ದು, ಸುಂಕದಕಟ್ಟೆಯಿಂದ ನಾಗರಬಾವಿ ಕಡೆಗೆ ಬರುತ್ತಿದ್ದ ಆಂಧ್ರ ಲಾರಿ, ಡ್ರೈವರ್ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಲಾರಿ ಸ್ಕಿಡ್ ಆಗ್ತಿದ್ದಂತೆ ಫ್ಲೈಓವರ್ನಿಂದ ಬಿದ್ದ ಮರದ ದಿಮ್ಮಿಗಳು, ಫ್ಲೈಓವರ್ ಕೆಳರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದಿದೆ. ಬೆಳ್ಳಂಬೆಳಗ್ಗೆ ಕೆಲಸಕ್ಕೆ ಹೋಗುತ್ತಿದ್ದ ತಮಿಳುನಾಡು ಮೂಲದ ಸುಖೇಶ್ ಎಂಬ ವ್ಯಕ್ತಿ ಮೃತ ಪಟ್ಟಿದ್ದಾನೆ. ಸದ್ಯ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಟ್ರಾಫಿಕ್ ಠಾಣೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.