Home ಟಾಪ್ ಸುದ್ದಿಗಳು ಬೆಂಗಳೂರು ಸ್ಫೋಟ ಪ್ರಕರಣ: ಜಾಮೀನು ಷರತ್ತು ಸಡಿಲಗೊಳಿಸಲು ಮಅದನಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ಬೆಂಗಳೂರು ಸ್ಫೋಟ ಪ್ರಕರಣ: ಜಾಮೀನು ಷರತ್ತು ಸಡಿಲಗೊಳಿಸಲು ಮಅದನಿ ಸಲ್ಲಿಸಿದ್ದ ಮನವಿ ತಿರಸ್ಕರಿಸಿದ ಸುಪ್ರೀಂಕೋರ್ಟ್

ನವದೆಹಲಿ: 2008ರ ಬೆಂಗಳೂರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಷರತ್ತುಗಳಲ್ಲಿ ಸಡಿಲಿಕೆ ಮಾಡಬೇಕೆಂದು ಕೋರಿದ್ದ ಪೀಪಲ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ನಾಯಕ ಅಬ್ದುಲ್ ನಾಸರ್ ಮಅದನಿ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ.


ಪ್ರಕರಣದ ವಿಚಾರಣೆ ವಿಳಂಬ ಆಗುತ್ತಿರುವುದರಿಂದ ಕೇರಳದಲ್ಲಿರುವ ತಮ್ಮ ಸ್ವಂತ ಊರಿಗೆ ತೆರಳಲು ಅನುಮತಿ ನೀಡಬೇಕು. ಈ ನಿಟ್ಟಿನಲ್ಲಿ ಮಅದನಿ ಅವರಿಗೆ ಇರುವ ಅನಾರೋಗ್ಯ ಸಮಸ್ಯೆ ಪರಿಗಣಿಸಿ ಜಾಮೀನು ನೀಡುವಾಗ ಸುಪ್ರೀಂಕೋರ್ಟ್ ವಿಧಿಸಿದ್ದ ಜಾಮೀನು ಷರತ್ತುಗಳನ್ನು ಸಡಿಲಗೊಳಿಸುವಂತೆ ಕೋರಲಾಗಿತ್ತು. ಆದರೆ ನ್ಯಾಯಮೂರ್ತಿಗಳಾದ ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿತು.


ಅನಾರೋಗ್ಯದ ಕಾರಣಕ್ಕೆ ಸುಪ್ರೀಂಕೋರ್ಟ್ ಮಅದನಿ ಅವರಿಗೆ 2014ರಲ್ಲಿ ಜಾಮೀನು ನೀಡಿತ್ತು. ಆದರೆ ಆಗ ನ್ಯಾಯಾಲಯ ಬೆಂಗಳೂರನ್ನು ತೊರೆಯದಂತೆ ಮಅದನಿ ಅವರಿಗೆ ಆದೇಶಿಸಿತ್ತು. ಪರಿಣಾಮವಾಗಿ ಮದನಿ ಅಂದಿನಿಂದಲೂ ನಗರದಲ್ಲಿ ನೆಲೆಸಿದ್ದಾರೆ.ಕರ್ನಾಟಕ ಸರ್ಕಾರದ ಆಲಸ್ಯದಿಂದಾಗಿ ವಿಚಾರಣೆ ದೀರ್ಘವಾಗಿದೆ ಎಂದು ಮನವಿಯಲ್ಲಿ ಪ್ರತಿಪಾದಿಸಲಾಗಿತ್ತು. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅವರನ್ನು ಮೂರು ಬಾರಿ ವರ್ಗಾವಣೆ ಮಾಡಿದ್ದು ಹಾಗೂ ಕೋವಿಡ್ ಹಿನ್ನೆಲೆಯಲ್ಲಿ ವಿಚಾರಣಾ ನ್ಯಾಯಾಲಯದಲ್ಲಿ ವಿಚಾರಣೆ ಬಸವನ ಹುಳುವಿನಂತೆ ತೆವಳುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿತ್ತು. ಅನಾರೋಗ್ಯದ ಕಾರಣವನ್ನೂ ಮುಂದಿಟ್ಟು ಮಅದನಿ ಕೇರಳಕ್ಕೆ ತೆರಳಲು ಅನುಮತಿ ಕೋರಿದ್ದರು. ಎರ್ನಾಕುಲಂನಲ್ಲಿ ಕಣ್ಣಿಗೆ ಆಯುರ್ವೇದ ಚಿಕಿತ್ಸೆ ಪಡೆಯುವಂತೆ ಬೆಂಗಳೂರಿನ ವೈದ್ಯರು ಸಲಹೆ ನೀಡಿದ್ದಾರೆ ಎಂದು ಅವರು ಹೇಳಿದ್ದರು.


ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಹ್ಯಾರಿಸ್ ಬೀರನ್ ಅವರು ಮಅದನಿ ಪರವಾಗಿ ವಾದ ಮಂಡಿಸಿದ್ದರು. ನ್ಯಾಯವಾದಿ ನಿಖಿಲ್ ಗೋಯೆಲ್ ಅವರು ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದರು. ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ಒಬ್ಬರ ವ್ಯಕ್ತಿ ಸಾವನ್ನಪ್ಪಿ 20 ಮಂದಿ ಗಾಯಗೊಂಡಿದ್ದರು. ಪೊಲೀಸರು ಸಲ್ಲಿಸಿದ ಹೆಚ್ಚುವರಿ ಅಫಿಡವಿಟ್ ನಲ್ಲಿ ಮಅದನಿ ಅವರನ್ನು 31ನೇ ಆರೋಪಿಯನ್ನಾಗಿ ಹೆಸರಿಸಲಾಗಿತ್ತು.

Join Whatsapp
Exit mobile version