ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವ ಸಿಡಬ್ಲ್ಯುಎಂಎ ಮತ್ತು ಸಿಡಬ್ಲ್ಯುಆರ್ ಸಿ ಆದೇಶವನ್ನು ಸುಪ್ರಿಂಕೋರ್ಟ್ ಎತ್ತಿ ಹಿಡಿದಿದೆ. ನ್ಯಾಯಾಲಯದ ಈ ನಿರ್ಧಾರವನ್ನು ವಿರೋಧಿಸಿ ರಾಜ್ಯದಲ್ಲಿ ಕನ್ನಡ ಪರ ಸಂಘಟನೆಗಳು, ರೈತರು ಮತ್ತು ಬಿಜೆಪಿ ಪ್ರತಿಭಟನೆ ಮಾಡುತ್ತಿವೆ. ಮಂಗಳವಾರ (ಸೆ.26) ರಂದು ಬೆಂಗಳೂರು ಬಂದ್ಗೆ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಕಾವೇರಿ ನಿವಾಸದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಿದರು. ಬಂದ್ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮತ್ತು ಕಾವೇರಿ ಕೊಳ್ಳದ ಜಿಲ್ಲೆಗಳಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಪ್ರತಿಭಟನೆ ಮಾಡಲು ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ನಾವು ಪ್ರತಿಭಟನೆಯನ್ನು ಅಡ್ಡಿ ಪಡಿಸಲು ಹೋಗಲ್ಲ. ಆದರೆ ಇದರಲ್ಲಿ ಬಿಜೆಪಿ, ಜೆಡಿಎಸ್ ನವರು ರಾಜಕೀಯ ಮಾಡುತ್ತಿದ್ದಾರೆ. ಸರ್ವಪಕ್ಷ ಸಭೆಯಲ್ಲಿ ಅವರು ನಮಗೆ ರಾಜೀನಾಮೆ ಕೊಡಿ ಅಂದ್ರಾ? ಈಗ ಕೊಡಿ ಎಂದು ಹೇಳುತ್ತಾರೆ. ಅವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.