Home ಟಾಪ್ ಸುದ್ದಿಗಳು ಬೆಂಗಳೂರಿನಲ್ಲಿ ರಸ್ತೆಗುಂಡಿ: ವಿಧಾನಸೌಧಕ್ಕೆ ಮುತ್ತಿಗೆಗೆ ಯತ್ನಿಸಿದ ಎಎಪಿ ಕಾರ್ಯಕರ್ತರ ಬಂಧನ

ಬೆಂಗಳೂರಿನಲ್ಲಿ ರಸ್ತೆಗುಂಡಿ: ವಿಧಾನಸೌಧಕ್ಕೆ ಮುತ್ತಿಗೆಗೆ ಯತ್ನಿಸಿದ ಎಎಪಿ ಕಾರ್ಯಕರ್ತರ ಬಂಧನ

ಬೆಂಗಳೂರು; ಬೆಂಗಳೂರಿನ ರಸ್ತೆಗುಂಡಿಗಳಿಗೆ ಸಂಬಂಧಿಸಿ ಮೂರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಮ್ ಆದ್ಮಿ ಪಾರ್ಟಿಯು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಸಿತು. ನಂತರ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಎಎಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಇದಕ್ಕೂ ಮೊದಲು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಎಎಪಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ, “ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ರಸ್ತೆಗಳು ಸಿಗಬೇಕೆಂದು ಆಗ್ರಹಿಸಿ ಆಮ್ ಆದ್ಮಿ ಪಾರ್ಟಿಯು ವರ್ಷಕ್ಕೂ ಅಧಿಕ ಸಮಯದಿಂದ ವಿವಿಧ ರೀತಿಯ ಚಳವಳಿ ಮಾಡುತ್ತಿದೆ. ಗುಂಡಿಗಳನ್ನು ಮುಚ್ಚುವಂತೆ ಆಗ್ರಹಿಸಿ ನಾವು ಹಲವು ಬಾರಿ ಪ್ರತಿಭಟನೆ ನಡೆಸಿದ್ದೇವೆ. ಗುಂಡಿಗಳ ಸುತ್ತ ರಂಗೋಲಿ ಹಾಕಿ ಪೂಜೆ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದೇವೆ. ಗುಂಡಿಗಳಿಗೆ ಕಾರಣವಾದವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ 71 ದೂರುಗಳನ್ನು ನೀಡಿದ್ದೇವೆ. ಆದರೆ ಸರ್ಕಾರ ಯಾವುದೇ ಕಠಿಣ ಕ್ರಮ ಕೈಗೊಳ್ಳದ ಕಾರಣ ಬೃಹತ್ ಪ್ರತಿಭಟನೆ ಆಯೋಜಿಸಿದ್ದೇವೆ” ಎಂದು ಹೇಳಿದರು.

ಪಕ್ಷದ ರಾಜ್ಯ ಉಪಾಧ್ಯಕ್ಷ ಭಾಸ್ಕರ್ ರಾವ್ ಮಾತನಾಡಿ, “ರಸ್ತೆ ಗುಂಡಿ ಸಮಸ್ಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಏಕೈಕ ಪಕ್ಷವೆಂದರೆ ಆಮ್ ಆದ್ಮಿ ಪಾರ್ಟಿ. ಇಂದು ಪೊಲೀಸರು ನಮ್ಮನ್ನು ಬಂಧಿಸಿದರೂ, ನಮ್ಮ ಹೋರಾಟ ಇನ್ನೊಂದು ದಿನ ಮುಂದುವರಿಯುತ್ತದೆ. ಹಲವು ರೀತಿಯ ತೆರಿಗೆಗಳನ್ನು ಕಟ್ಟುವ ಜನರಿಗೆ ಉತ್ತಮ ರಸ್ತೆಗಳು ಸಿಗುವಂತೆ ಮಾಡಲು ಆಮ್ ಆದ್ಮಿ ಪಾರ್ಟಿ ಸದಾ ಬದ್ಧವಾಗಿರುತ್ತದೆ ಎಂದು ಹೇಳಿದರು.

ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ನಗರಾಧ್ಯಕ್ಷ ಮೋಹನ್, ಆಮ್ ಆದ್ಮಿ ಪಾರ್ಟಿ ಮುಖಂಡರಾದ ಕೆ.ಮಥಾಯಿ, ಬ್ರಿಜೇಶ್ ಕಾಳಪ್ಪ, ಬಿ.ಟಿ.ನಾಗಣ್ಣ, ಜಗದೀಶ್ ವಿ ಸದಂ, ಕುಶಲಸ್ವಾಮಿ, ಉಷಾ ಮೋಹನ್, ಸಂಚಿತ್ ಸವ್ಹಾನಿ, ದರ್ಶನ್ ಜೈನ್, ಸುರೇಶ್ ರಾಥೋಡ್, ಜಗದೀಶ್ ಚಂದ್ರ, ರಾಜಶೇಖರ್ ದೊಡ್ಡಣ್ಣ, ಚನ್ನಪ್ಪಗೌಡ ನೆಲ್ಲೂರು, ಪ್ರಕಾಶ್ ನೆಡುಂಗಡಿ, ರವಿಚಂದ್ರ ನೆರಬೆಂಚಿ, ಅಶೋಕ್ ಮೃತ್ಯುಂಜಯ, ಫಾರಿದಾ, ವಿಜಯ್ ಶಾಸ್ತ್ರಿಮಠ್, ಅಮೃತಾ ಮತ್ತಿತರರು ಭಾಗವಹಿಸಿದ್ದರು.

Join Whatsapp
Exit mobile version