ಕೋಲ್ಕತ್ತಾ: ಜನವರಿ 5 ರಂದು ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಾಹನದ ಮೇಲೆ ನಡೆದ ದಾಳಿ ಪ್ರಕರಣದ ತನಿಖೆಯನ್ನು ಕಲ್ಕತ್ತಾ ಹೈಕೋರ್ಟ್ ಸಿಬಿಐ ತನಿಖೆಗೆ ಒಪ್ಪಿಸಿದ್ದು, ಶಹಜಹಾನ್‌ರನ್ನು ಸಿಬಿಐಗೆ ಒಪ್ಪಿಸಲು ಸೂಚನೆ ನೀಡಿದೆ.
ಮಂಗಳವಾರ ಸಂಜೆ ವೇಳೆಗೆ ನಿರ್ದೇಶನಗಳ ಪಾಲನೆ ಆಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಶಿವಜ್ಞಾನಂ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ಇ.ಡಿ ಅಧಿಕಾರಿಗಳ ವಾಹನದ ಮೇಲೆ ಗುಂಪೊಂದು ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ತನಿಖಾ ತಂಡ ಮತ್ತು ಪಶ್ಚಿಮ ಬಂಗಾಳ ಪೊಲೀಸರು ಜಂಟಿಯಾಗಿ ತನಿಖೆ ನಡೆಸಬೇಕೆಂದು ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಇ.ಡಿ ಮತ್ತು ಪಶ್ಚಿಮ ಬಂಗಾಳ ಸರ್ಕಾರವು ವಿಭಾಗೀಯ ಪೀಠದ ಮುಂದೆ ಪ್ರತ್ಯೇಕ ಮನವಿ ಸಲ್ಲಿಸಿತ್ತು.
ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಇ.ಡಿ ಮನವಿ ಮಾಡಿದರೆ, ರಾಜ್ಯ ಪೊಲೀಸರಿಗೆ ತನಿಖೆ ಒಪ್ಪಿಸುವಂತೆ ಸರ್ಕಾರ ವಾದಿಸಿತ್ತು.