ಕೋಲ್ಕತಾ: ಪಶ್ಚಿಮ ಬಂಗಾಳದ ಸಂದೇಶ್‌ಖಾಲಿಯಲ್ಲಿ ತೃಣಮೂಲ ಕಾಂಗ್ರೆಸ್‌ನಿಂದ ಗ್ರಾಮಸ್ಥರಿಗೆ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ, ಸ್ಥಳಕ್ಕೆ ಹೊರಟಿದ್ದ ಬಿಜೆಪಿ ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕರ ನೇತೃತ್ವದ ಎರಡು ನಿಯೋಗಗಳನ್ನು ಸ್ಥಳಕ್ಕೆ ಹೋಗದಂತೆ ಪೊಲೀಸರು ತಡೆದಿದ್ದಾರೆ.
ತೃಣಮೂಲ ಕಾಂಗ್ರೆಸ್ ಪ್ರಬಲ ನಾಯಕ ಶೇಖ್ ಷಹಜಹಾನ್ ಅವರ ಆಪ್ತರಿಂದ ಗ್ರಾಮದಲ್ಲಿ ಮಹಿಳೆಯರ ಮೇಲೆ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ನಡೆದಿದೆ ಎಂದು ಬಿಜೆಪಿ ಪದೇ ಪದೇ ಹೇಳಿಕೊಂಡಿದೆ. ಆಡಳಿತ ಪಕ್ಷವು ದೂರುಗಳನ್ನು ದಾಖಲಿಸಲು ಬಿಡುತ್ತಿಲ್ಲ ಎಂದು ಆರೋಪಿಸಿದೆ.
ತೃಣಮೂಲ ಕಾಂಗ್ರೆಸ್ ಆರೋಪಗಳನ್ನು ತಳ್ಳಿಹಾಕಿದ್ದು, ಬಿಜೆಪಿಯು ಸಮಸ್ಯೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಹೇಳಿದೆ. ಬಿಜೆಪಿ ಆರೋಪಿಸುವಂತ ಘಟನೆಗಳಿಗೆ ಬಂಗಾಳ ಪೊಲೀಸರು ಯಾವುದೇ ದೂರುಗಳನ್ನು ಸ್ವೀಕರಿಸಿಲ್ಲ ಎಂದು ಹೇಳಿದೆ.
ಕೇಂದ್ರ ಸಚಿವೆ ಸುನೀತಾ ದುಗ್ಗಲ್ ನೇತೃತ್ವದ ಆರು ಸದಸ್ಯರ ಬಿಜೆಪಿ ನಿಯೋಗವನ್ನು ಗ್ರಾಮಕ್ಕೆ ಹೋಗದಂತೆ ಮೂರನೇ ಬಾರಿ ತಡೆಯಲಾಗಿದೆ. ಬಿಜೆಪಿ ನಿಯೋಗವು ಪಶ್ಚಿಮ ಬಂಗಾಳದ ರಾಜ್ಯಪಾಲ ಸಿವಿ ಆನಂದ ಬೋಸ್ ಅವರನ್ನು ಭೇಟಿಯಾಗಿ ದೂರು ನೀಡಿದೆ.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ನೇತೃತ್ವದ ಪಕ್ಷದ ನಿಯೋಗವನ್ನು ಎರಡು ಬಾರಿ, ಒಮ್ಮೆ ಸರ್ಬೇರಿಯಾದಲ್ಲಿ ಮತ್ತು ನಂತರ ಉತ್ತರ 24 ಪರಗಣ ಜಿಲ್ಲೆಯ ರಾಂಪುರದಲ್ಲಿ ತಡೆಯಲಾಗಿದೆ.