Home ಕ್ರೀಡೆ ಐಪಿಎಲ್‌ನಿಂದಾಗಿ ಕ್ರಿಕೆಟ್‌ಅನ್ನು ದ್ವೇಷಿಸುವಂತಾಗಿದೆ; ಬೆನ್‌ ಸ್ಟೋಕ್ಸ್‌

ಐಪಿಎಲ್‌ನಿಂದಾಗಿ ಕ್ರಿಕೆಟ್‌ಅನ್ನು ದ್ವೇಷಿಸುವಂತಾಗಿದೆ; ಬೆನ್‌ ಸ್ಟೋಕ್ಸ್‌

ಇಂಗ್ಲೆಂಡ್‌: ಇತ್ತೀಚಿನ ವರ್ಷಗಳಲ್ಲಿ ಕ್ರಿಕೆಟಿಗರು ಬಿಡುವಿಲ್ಲದ ವೇಳಾಪಟ್ಟಿಯನ್ನು ಹೊಂದಿದ್ದಾರೆ. ಅದರಲ್ಲೂ ಮೂರು ಆವೃತ್ತಿಯಲ್ಲಿ ಆಡುವ ತಂಡದ ಪ್ರಮುಖ ಆಟಗಾರರು, ತಮ್ಮ ಪ್ರೀತಿ ಪಾತ್ರರ ಜೊತೆ ಕಳೆಯಲು ಸಮಯವಿಲ್ಲದೆ ಕೊರಗುತ್ತಿದ್ದಾರೆ. ಇದರ ಜೊತೆಗೆ ಐಪಿಎಲ್‌ ಸೇರಿದಂತೆ ಟಿ20 ಲೀಗ್‌ಗಳು ಸೇರ್ಪಡೆಯಾಗುವುದರಿಂದ ವರ್ಷಪೂರ್ತಿ ಮೈದಾನ ಮತ್ತು ಪ್ರಯಾಣದಲ್ಲೇ ಕಳೆಯುವಂತಾಗಿದೆ.

ನಿಬಿಡ ವೇಳಾಪಟ್ಟಿಯ ವಿರುದ್ಧ ಅನೇಕ ಕ್ರಿಕೆಟಿಗರು ಈಗಾಗಲೇ ಬಹಿರಂಗವಾಗಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಸಾಲಿಗೆ ಹೊಸ ಸೇರ್ಪಡೆ ಇಂಗ್ಲೆಂಡ್‌ನ ಟೆಸ್ಟ್‌ ತಂಡದ ನಾಯಕ ಬೆನ್‌ ಸ್ಟೋಕ್ಸ್‌.

ತಮ್ಮ ತಂದೆಯ ಸಾವಿನ ಸಂದರ್ಭದಲ್ಲಿ ಜೊತೆಗಿರಲು ಸಾಧ್ಯವಾಗದೇ ಇರುವುದನ್ನು ನೆನೆದು ಭಾವುಕರಾದ ಸ್ಟೋಕ್ಸ್‌,  ಐಪಿಎಲ್‌ನಿಂದಾಗಿ ಒಟ್ಟಾರೆ ಕ್ರಿಕೆಟ್‌ಅನ್ನು ದ್ವೇಷಿಸುವಂತಾಗಿದೆ ಎಂದು ಹೇಳಿದ್ದಾರೆ. 2020ರ ಡಿಸೆಂಬರ್‌ ತಿಂಗಳಲ್ಲಿ ಬೆನ್‌ ಸ್ಟೋಕ್ಸ್‌  ಅವರ ತಂದೆ ಗೆರಾರ್ಡ್‌(65) ಮೃತಪಟ್ಟಿದ್ದರು. ಈ ವೇಳೆ ಸ್ಟೋಕ್ಸ್‌, ಯುಎಇಯಲ್ಲಿ ನಡೆಯುತ್ತಿದ್ದ ಐಪಿಎಲ್‌ ಟೂರ್ನಿಯಲ್ಲಿ ಆಡುತ್ತಿದ್ದರು. ಹೀಗಾಗಿ ಸಾಯುವ ಮುನ್ನ ತಂದೆಯವರನ್ನು ಭೇಟಿಮಾಡಲು ಇಂಗ್ಲೆಂಡ್‌ನ ಟೆಸ್ಟ್‌ ತಂಡದ ನಾಯಕನಿಗೆ ಸಾಧ್ಯವಾಗಿರಲಿಲ್ಲ. ಎರಡು ವರ್ಷದ ಹಿಂದೆ ಬೆನ್‌ ಸ್ಟೋಕ್ಸ್‌  ಅವರ ತಂದೆ ಗೆರಾರ್ಡ್‌ಅವರಿಗೆ ಬ್ರೈನ್‌ ಕ್ಯಾನ್ಸರ್‌ ಇರುವುದು ಪತ್ತೆಯಾಗಿತ್ತು. ಇದಾದ ಬಳಿಕ ಅವರು 11 ತಿಂಗಳ ಕಾಲ ಚಿಕಿತ್ಸೆ ಪಡೆದಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಅವರು ವಿಧಿವಶರಾಗಿದ್ದರು.

ತಂದೆಯ ಸಾವಿನ ಬಳಿಕ ನಾನು ಮಾನಸಿಕ ಆಘಾತಕ್ಕೆ ಒಳಗಾಗಿದ್ದೆ. ಇದರಿಂದ ಹೊರಬರಲು ಈಗಲೂ ವೈದ್ಯಕೀಯ ಸಹಾಯ ಪಡೆಯುತ್ತಿದ್ದೇನೆ ಎಂದು ʻದಿ ಟೆಲಿಗ್ರಾಫ್‌ʼಗೆ ನೀಡಿರುವ ಸಂದರ್ಶನದಲ್ಲಿ ಸ್ಟೋಕ್ಸ್‌ ಹೇಳಿದ್ದಾರೆ.

ನ್ಯೂಜಿಲೆಂಡ್‌ನಲ್ಲಿ ಟೆಸ್ಟ್ ಸರಣಿಯಲ್ಲಿ ಭಾಗವಹಿಸಿದ್ದ ಸ್ಟೋಕ್ಸ್‌, ಅಲ್ಲಿಂದ ನೇರವಾಗಿ 2020ರ ಐಪಿಎಲ್ ಟೂರ್ನಿ ಆಡಲು ನೇರವಾಗಿ ಯುಎಇಗೆ ತೆರಳಿದ್ದರು. ನಿರಂತರ ಕ್ರಿಕೆಟ್‌ನಿಂದಾಗಿ ತಮ್ಮ ತಂದೆಯ ಕೊನೆಯ ದಿನಗಳಲ್ಲಿ ಅವರ ಜೊತೆ ಕಳೆಯಲು ಸಾಧ್ಯವಾಗದೇ ಇರುವುದನ್ನು ನೆನೆದು ಬೆನ್‌ ಸ್ಟೋಕ್ಸ್‌ ಭಾವುಕರಾಗಿದ್ದಾರೆ. 2021ರ ಬೇಸಿಗೆಯಲ್ಲಿ ತಮ್ಮ ಮಾನಸಿಕ ಆರೋಗ್ಯದಿಂದಾಗಿ ಬೆನ್‌ ಸ್ಟೋಕ್ಸ್‌, ಕ್ರಿಕೆಟ್‌ನಿಂದ ದೀರ್ಘಾವಧಿ ವಿರಾಮ ಪಡೆದಿದ್ದರು.

Join Whatsapp
Exit mobile version