ಮಂಗಳೂರು: ಮತಗಟ್ಟೆಯಲ್ಲಿ ಅಧಿಕಾರಿಗಳು ಮತದಾನ ಪ್ರಕ್ರಿಯೆಯಲ್ಲಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ ಘಟನೆ ನಡೆದಿದ್ದು, ಜನ ನಿಯಂತ್ರಿಸಲು ನಿನ್ನೆ ತಡರಾತ್ರಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಘಟನೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ನಡೆದಿದೆ.
ಚಾರ್ಮಾಡಿ ಚೆಕ್ ಪೋಸ್ಟ್ ಸಮೀಪವಿರುವ ಮತಗಟ್ಟೆ ಸಂಖ್ಯೆ 21, 22, 23 ರಲ್ಲಿ ರಾತ್ರಿ 8.30 ಆದರೂ ಮತದಾನವಾಗಿರಲಿಲ್ಲ. ಬಳಿಕ ಮತದಾನ ಪ್ರಕ್ರಿಯೆ ಪೂರ್ಣಗೊಂಡರೂ ಅಧಿಕಾರಿಗಳು ಮತಗಟ್ಟೆ ಒಳಗೆ ಎರಡು ತಾಸು ವಿಳಂಬ ಮಾಡಿರುವುದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿ ಅಧಿಕಾರಿಗಳು ಹೊರಡುವ ವೇಳೆ ತಡೆದರು.
ಇದರಿಂದ ಪರಿಸ್ಥಿತಿ ಹದಗೆಟ್ಟಿತ್ತು. ಬಳಿಕ ಹೆಚ್ಚುವರಿ ಪೊಲೀಸರನ್ನು ಸ್ಥಳಕ್ಕೆ ಕರೆಸಲಾಯಿತು. ರಾತ್ರಿ ಸುಮಾರು 11.30 ಗಂಟೆಯಾದರು ಇವಿಎಂ ಮತಯಂತ್ರಗಳನ್ನು ಕಳುಹಿಸಿಕೊಡಲು ಸೇರಿದ್ದ ಜನ ಆಕ್ರೊಶ ವ್ಯಕ್ತಪಡಿಸಿದ್ದಲ್ಲದೆ ಕಲ್ಲು ತೂರಾಟಕ್ಕೆ ಮುಂದಾಗಿದ್ದರು. ರಾತ್ರಿ 500 ಕ್ಕೂ ಅಧಿಕ ಮಂದಿ ಜಮಾಯಿಸಿದ್ದರು.
ಬಳಿಕ ಸೇರಿದ್ದ ಜನರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಬಳಿಕ ಪೊಲೀಸ್ ಬಂದೋಬಸ್ತ್ ನಲ್ಲಿ ರಾತ್ರಿ ಸುಮಾರು 12 ಗಂಟೆಗೆ ಮತ ಪೆಟ್ಟಿಗೆಗಳನ್ನು ಉಜಿರೆ ಸ್ಟ್ರಾಂಗ್ ರೂಮ್ ಗೆ ರವಾನಿಸಿದ ಘಟನೆ ನಡೆಯಿತು.
ಸ್ಥಳದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ಹೊರ ಹಾಕಿದ್ದು, ಚೆಕ್ ಪೋಸ್ಟ್ ಬಳಿ ನಿಂತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆಗೆ ಮುಂದಾಗಿ ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ಘಟನೆ ನಡೆಯಿತು. ಉದ್ವಿಗ್ನ ಪರಿಸ್ಥಿತಿ ಉಂಟಾದ ಪರಿಣಾಮ ಹೆಚ್ಚುವರಿ ಪೊಲೀಸ್ ನಿಯೋಜಿಸಲಾಯಿತು.