ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸುಧೀರ್ ಜೋಗಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಗರ್ಭಿಣಿಯಾದ ಬಳಿಕ ಆರೋಪಿ ಗರ್ಭಪಾತ ಮಾಡಿದ್ದ. ಆರೋಪಿಯನ್ನು ಚಿಕ್ಕಮಗಳೂರಿನಲ್ಲಿ ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಟಿವಿ ನೋಡಲು ಮನೆಗೆ ಬರುತಿದ್ದ ಬಾಲಕಿ ಮೇಲೆ ಆರೋಪಿ ಸುಧೀರ್ ಬೆದರಿಕೆ ಹಾಕಿ ನಿರಂತರ ಅತ್ಯಾಚಾರವೆಸಗುತಿದ್ದ. ಇದರಿಂದ ಬಾಲಕಿ ಗರ್ಭಿಣಿಯಾಗಿದ್ದು, ನಂತರ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲು ಆರೋಪಿ ಸುಧೀರ್ ನಿಗೆ ಹಲವು ಮಂದಿ ಸಾಥ್ ನೀಡಿದ್ದರು ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ಜ. 2 ರಂದು ಪ್ರಕರಣ ದಾಖಲಾಗಿತ್ತು.
ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕೊಪ್ಪದಗಂಡಿ ನಿವಾಸಿ ಮನೋಹರ(23) ಮತ್ತು ಮಾಧವ ಯಾನೆ ಮಾಧು(30) ಎಂಬವರನ್ನು ಜ.7 ರಂದು ಬಂಧಿಸಲಾಗಿತ್ತು. ಇದೀಗ ಪ್ರಕರಣ ಪ್ರಮುಖ ಆರೋಪಿ ಸುಧೀರ್ ಜೋಗಿ (27) ಎಂಬಾತನನ್ನು ಚಿಕ್ಕಮಗಳೂರಿನಲ್ಲಿ ಬೆಳ್ತಂಗಡಿ ಪೊಲೀಸರು ಬಂಧಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಅತ್ಯಾಚಾರ ಆರೋಪಿಗಳನ್ನು ತಕ್ಷಣ ಬಂಧಿಸದಿದ್ದರೆ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದು ಬಿಲ್ಲವ ಸಮುದಾಯ ಪೊಲೀಸ್ ಠಾಣೆಗೆ ತೆರಳಿ ಎಚ್ಚರಿಕೆಯನ್ನು ನೀಡಿತ್ತು.