July 23, 2021

ಬೆಳ್ತಂಗಡಿ: ನಿಶ್ಚಿತಾರ್ಥವಾಗಿದ್ದ ಯುವಕನ ಕೊಲೆ ಪ್ರಕರಣ|ಆರೋಪ ಸಾಬೀತು

ಬೆಳ್ತಂಗಡಿ: ಮದುವೆ ನಿಶ್ಚಯವಾಗಿದ್ದ ಬೆಳ್ತಂಗಡಿ ದಿಡುಪೆ ನಿವಾಸಿ ಸುರೇಶ್ ನಾಯ್ಕ (30) ಎಂಬವರನ್ನು ಆರು ಮಂದಿಯ ತಂಡವೊಂದು ಕಾರಿನಲ್ಲಿ ಅಪಹರಿಸಿ ಕೊಲೆಗೈದ ಪ್ರಕರಣ 1ನೇ ಜಿಲ್ಲಾ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಶಿಕ್ಷೆ ಪ್ರಮಾಣದ ಜು.28ಕ್ಕೆ ಪ್ರಕಟವಾಗಲಿದೆ.

ಬೆಳ್ತಂಗಡಿ ನಾವರ ನಿವಾಸಿ ಆನಂದ ನಾಯ್ಕ (39), ಬೆಳ್ತಂಗಡಿ ಕಸಬಾ ನಿವಾಸಿ ಪ್ರವೀಣ್ ನಾಯ್ಕ (39), ಚಾರ್ಮಾಡಿ ನಿವಾಸಿ ವಿನಯ ಕುಮಾರ್ (34), ಮೂಡುಕೋಡಿ ನಿವಾಸಿ ಪ್ರಕಾಶ್ (35), ಬಂಟ್ವಾಳ ಪುದು ನಿವಾಸಿ ಲೋಕೇಶ್ (38), ಮೇಲಂತಬೆಟ್ಟು ನಿವಾಸಿ ನಾಗರಾಜ (43) ಪ್ರಕರಣದ ಅಪರಾಧಿಗಳು.

ಪ್ರಕರಣ ವಿವರ: ನಾವರ ಮೂಲದ ಆನಂದ ನಾಯ್ಕ ಎಂಬವರಿಗೆ ಮದುವೆಯಾಗಿ ಮಕ್ಕಳಿವೆ. ಇದರ ಹೊರತಾಗಿಯೂ ಈತ ಪರಿಚಯದ ಯುವತಿಯನ್ನು ಪ್ರೀತಿಸುತ್ತಿದ್ದ. ಆ ಯುವತಿಯನ್ನು ಮದುವೆಯಾಗುವ ಹಠಕ್ಕೆ ಬಿದ್ದು, ಯುವತಿಯ ತಂದೆಯಲ್ಲಿ ವಿಷಯ ಪ್ರಸ್ತಾಪಿಸಿದ್ದ. ಆದರೆ ಯುವತಿ ಮನೆಯವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ಕೆಲವು ದಿನಗಳ ನಂತರ ದಿಡುಪೆ ನಿವಾಸಿ ಸುರೇಶ್ ನಾಯ್ಕ ಜತೆ ಯುವತಿಯ ಮದುವೆ ಸಂಬಂಧ ಕೂಡಿ ಬಂದಿತ್ತು. 2017ರ ಎಪ್ರಿಲ್ 30ರಂದು ನಿಶ್ಚಿತಾರ್ಥಕ್ಕೆ ದಿನ ನಿಗದಿಯಾಗಿತ್ತು. ಈ ವಿಷಯ ಆನಂದ ನಾಯ್ಕ ಗಮನಕ್ಕೆ ಬಂದಿದೆ. ಯುವತಿಯ ಮನೆಯವರಲ್ಲಿ ಸುರೇಶ್ ನಾಯ್ಕನ ಮೊಬೈಲ್ ನಂಬರ್ ಸಂಗ್ರಹಿಸಿ ‘ನೀನು ಮದುವೆಯಾಗುವ ಯುವತಿಯನ್ನು ನಾನು ಪ್ರೀತಿಸುತ್ತಿದ್ದು ಈ ಸಂಬಂಧವನ್ನು ಬಿಟ್ಟುಬಿಡು’ ಎಂದು ಒತ್ತಾಯಿಸಿದ್ದಾನೆ.

ಇದಕ್ಕೆ ಒಪ್ಪದಿದ್ದಾಗ ಸುರೇಶ್ ನಾಯ್ಕಾಗೆ ಜೀವ ಬೆದರಿಕೆಯನ್ನೂ ಆರೋಪಿ ಹಾಕಿದ್ದಾನೆ. ನಂತರ 2017 ಜುಲೈ 29ರಂದು ಎರಡನೇ ಆರೋಪಿ ಪ್ರವೀಣ್ ನಾಯ್ಕಾ ಎಂಬಾತನು ಸುರೇಶ್ ನಾಯ್ಕಾಗೆ ಕರೆ ಮಾಡಿ ಆತ್ಮೀಯವಾಗಿ ಮಾತನಾಡಿ ‘ಗಂಗಾ ಕಲ್ಯಾಣ ಯೋಜನೆಯಡಿ ಹಣ ಸಿಗುವ ಬಗ್ಗೆ ಮಾಹಿತಿ ನೀಡಿದ್ದಲ್ಲದೆ, ಉಜಿರೆಗೆ ಬನ್ನಿ’ ಎಂದು ತಿಳಿಸಿದ್ದಾನೆ. ಅದರಂತೆ ಸುರೇಶ್ ನಾಯ್ಕಾ ಉಜಿರೆಗೆ ಬಂದಾಗ ಆರೋಪಿಗಳಾದ ಪ್ರವೀಣ್ ನಾಯ್ಕಾ, ವಿನಯ್, ಪ್ರಕಾಶ್, ಲೋಕೇಶ್, ನಾಗರಾಜ್ ಒಟ್ಟು ಸೇರಿ ಮಾರುತಿ ಓಮ್ನಿಯಲ್ಲಿ ಸುರೇಶ್ ನಾಯ್ಕಿನನ್ನು ಕಾರಿನಲ್ಲಿ ಪಟ್ರಮೆ-ಧರ್ಮಸ್ಥಳ ರಸ್ತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ. ಈ ಸಂದರ್ಭ ಯುವಕನಲ್ಲಿ ಮದುವೆ ನಿರಾಕರಿಸಲು ತಂಡ ಒತ್ತಡ ಹಾಕಿದ್ದು, ಇದಕ್ಕೆ ಒಪ್ಪದಿದ್ದಾಗ ಕುತ್ತಿಗೆಗೆ ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾರೆ.

ನಂತರ ಆನಂದ್ ನಾಯ್ಕಾ ಜತೆಗೂಡಿ ಮೃತದೇಹವನ್ನು ಧರ್ಮಸ್ಥಳದ ಅವೆಕ್ಕಿಯ ತಗ್ಗು ಪ್ರದೇಶದಲ್ಲಿ ಮೃತದೇಹಕ್ಕೆ ಗೋಣಿ ಚೀಲವನ್ನು ಸುತ್ತಿ ಪೆಟ್ರೋಲ್ ಹಾಕಿ ಮೃತದೇಹದ ಗುರುತು ಸಿಗದಂತೆ ಸುಟ್ಟು ಹಾಕಿದ್ದಾರೆ. ಮೃತಪಟ್ಟ ವ್ಯಕ್ತಿಯ ಸೊತ್ತುಗಳನ್ನು ಕೊಯ್ಯೂರು ಕಟ್ಟ ಎಂಬಲ್ಲಿ ಮೋರಿಯ ಕೆಳಗೆ ಸುಟ್ಟು ಹಾಕಿದ್ದರು. ಈ ಪ್ರಕರಣ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರು ಆರೋಪಿಗಳನ್ನು ಮೇ 4ರಂದು ಬಂಧಿಸಲಾಗಿತ್ತು.

ಪ್ರಕರಣದ ಸಮಗ್ರ ವಿಚಾರಣೆ ನಡೆಸಿದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾೀಶ ಟಿ.ಪಿ. ರಾಮಲಿಂಗೇಗೌಡ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದ್ದಾರೆ. ಅಪರಾಗಳ ವಿರುದ್ಧ ಐಪಿಸಿ 302 (ಕೊಲೆ), 201 (ಸಾಕ್ಷ್ಯನಾಶ), 120ಬಿ (ಸಂಚು), 149 (ಸಮಾನ ಉದ್ದೇಶಿತ ಕೃತ್ಯ) ಪ್ರಕರಣ ಸಾಬೀತುಗೊಂಡಿದೆ. ಧರ್ಮಸ್ಥಳ ಪೊಲೀಸ್ ಠಾಣೆಯ ಹಿಂದಿನ ಇನ್‌ಸ್ಪೆಕ್ಟರ್ ಟಿ.ಪಿ. ರಾಮಲಿಂಗೇಗೌಡ ಪ್ರಕರಣದ ಸಮಗ್ರ ವಿಚಾರಣೆ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. 33 ಮಂದಿ ಸಾಕ್ಷಿ ವಿಚಾರಣೆ ನಡೆಸಲಾಗಿದೆ.

ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಶೇಖರ್ ಶೆಟ್ಟಿ ವಾದಿಸಿದ್ದರು.

ಸಾಕ್ಷ್ಯ ನೀಡಿದ ಕಾಲ್ ಡಿಟೇಲ್ಸ್: ಕೊಲೆಯಾದ ಸುರೇಶ್ ನಾಯ್ಕ್ ಆರೋಪಿ ಪ್ರವೀಣ್ ನಾಯ್ಕ್ ಕೊನೇ ಬಾರಿ ಕರೆ ಮಾಡಿದ್ದುಘಿ, ಇದೇ ಆಧಾರದಲ್ಲಿ ಇಡೀ ಪ್ರಕರಣವನ್ನು ಬೇಸಲಾಗಿತ್ತುಘಿ. ಇದು ಮಾತ್ರವಲ್ಲದೆ ಸುರೇಶ್ ನಾಯ್ಕ್ ಮತ್ತು ಅವರ ತಾಯಿಯ ಡಿಎನ್‌ಎ ತಪಾಸಣೆಯೂ ಕೂಡಿ ಬಂದಿತ್ತು. ಈ ಎಲ್ಲ ಸಾಕ್ಷ್ಯಾಧಾರಗಳು ಪ್ರಕರಣ ಸಾಬೀತಾಗಲು ಬಲ ನೀಡಿದ್ದವು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!