Home ಟಾಪ್ ಸುದ್ದಿಗಳು ಬಳ್ಳಾರಿ: ವಿಮಾನ ನಿಲ್ದಾಣದ ಕಾಮಗಾರಿಯ ಒಪ್ಪಂದ ರದ್ದು

ಬಳ್ಳಾರಿ: ವಿಮಾನ ನಿಲ್ದಾಣದ ಕಾಮಗಾರಿಯ ಒಪ್ಪಂದ ರದ್ದು

ಬಳ್ಳಾರಿ: ಚಾಗನೂರಿನಲ್ಲಿ ವಿಮಾನ ನಿಲ್ದಾಣ ಅಭಿವೃದ್ಧಿಪಡಿಸಲು ಚೆನ್ನೈ ಮೂಲದ ‘ಮಾರ್ಗ್‌’ ಕಂಪನಿ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ರಾಜ್ಯ ಸರ್ಕಾರ ರದ್ದುಪಡಿಸಿದೆ.


ಚಾಗನೂರಿನಲ್ಲಿ ಸ್ವಾಧೀನ ಪಡಿಸಿಕೊಂಡಿರುವ 987 ಎಕರೆ ಜಮೀನಿನಲ್ಲಿ ವಿಮಾನ ನಿಲ್ದಾಣ ನಿರ್ಮಿಸಲು 2010ರ ಆಗಸ್ಟ್‌ 6ರಂದು ಚೆನ್ನೈ ಮೂಲದ ಮಾರ್ಗ್‌ ಜತೆ ಸರ್ಕಾರ ಒಪ್ಪಂದ ಮಾಡಿಕೊಂಡಿತ್ತು. 13 ವರ್ಷ ಕಳೆದರೂ ಯೋಜನೆ ಪ್ರಗತಿ ಕಾಣದಿದ್ದರಿಂದ ಒಪ್ಪಂದ ರದ್ದಾಗಿದೆ.


ವಿಮಾನ ನಿಲ್ದಾಣ ಯೋಜನೆ ವಿಳಂಬವಾಗಿರುವ ಕುರಿತು ಕಾರಣ ಕೇಳಿ ಜೂನ್‌ 8ರಂದು ಮಾರ್ಗ್‌’ಗೆ ನೋಟಿಸ್‌ ನೀಡಲಾಗಿತ್ತು. ನೋಟಿಸ್‌ಗೆ ಕಂಪನಿ ನೀಡಿದ್ದ ಉತ್ತರ ತೃಪ್ತಿಕರವಾಗಿರಲಿಲ್ಲ. ಬಳಿಕ ಕಾನೂನು ಮತ್ತು ಆರ್ಥಿಕ ಇಲಾಖೆಯ ಒಪ್ಪಿಗೆ ಪಡೆದು ಮೂಲಸೌಲಭ್ಯ ಇಲಾಖೆ ಒಪ್ಪಂದ ರದ್ದುಪಡಿಸಲು ಏಪ್ರಿಲ್‌ 4ರಂದು ಶಿಫಾರಸು ಮಾಡಿತ್ತು. ಸಂಪುಟ ಸಭೆಯಲ್ಲಿ ಶಿಫಾರಸಿಗೆ ಅನುಮತಿ ದೊರೆತಿದ್ದರಿಂದ ಒಪ್ಪಂದ ರದ್ದುಪಡಿಸಿ ಆದೇಶ ಹೊರಡಿಸಲಾಗಿದೆ.


ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ನಿಗಮವೇ (ಕೆಎಸ್‌ಐಐಡಿಸಿ) ಸ್ಪರ್ಧಾತ್ಮಕ ಬಿಡ್‌ ಕರೆದು ಇಪಿಸಿ ಮಾದರಿಯಲ್ಲಿ ವಿಮಾನ ನಿಲ್ದಾಣ ಯೋಜನೆ ಅನುಷ್ಠಾನ ಮಾಡಲಿದ್ದು, ಇದೀಗ ಕಾರ್ಯಕ್ಷಮತೆ ಭದ್ರತೆಗೆ ಕಂಪನಿ ಇಟ್ಟಿದ್ದ ₹4 ಕೋಟಿ ಬ್ಯಾಂಕ್‌ ಗ್ಯಾರಂಟಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

Join Whatsapp
Exit mobile version