►ಮೂವರನ್ನು ವಶಕ್ಕೆ ಪಡೆದ ಪೊಲೀಸರು
ಪುಣೆ: ಡಾ.ಬಿ.ಆರ್. ಅಂಬೇಡ್ಕರ್ ಮತ್ತು ಸಮಾಜ ಸುಧಾರಕ ಮಹಾತ್ಮ ಜ್ಯೋತಿಬಾ ಫುಲೆ ಕುರಿತು ನಿಂದನಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಸಚಿವ ಹಾಗೂ ಬಿಜೆಪಿ ಮುಖಂಡ ಚಂದ್ರಕಾಂತ್ ಪಾಟೀಲ್ ಅವರ ಮುಖಕ್ಕೆ ಮಸಿ ಎರಚಿದ ಘಟನೆ ಪುಣೆ ಸಮೀಪದ ಪಿಂಪ್ರಿ ನಗರದಲ್ಲಿ ನಡೆದಿದೆ.
ಪಾಟೀಲ್ ಅವರ ಮುಖಕ್ಕೆ ಮಸಿ ಎರಚಿದ ವ್ಯಕ್ತಿ ಮತ್ತು ಆತನ ಜೊತೆಗೆ ಇದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸ್ ಕಮಿಷನರ್ ಅಂಕುಶ್ ಶಿಂಧೆ ತಿಳಿಸಿದ್ದಾರೆ.
ಸಚಿವರು ಕಟ್ಟಡದಿಂದ ಹೊರಬರುತ್ತಿದ್ದಂತೆ ವ್ಯಕ್ತಿಯೊಬ್ಬ ಮಸಿ ಎರಚುವ ವೀಡಿಯೋ ವ್ಯಾಪಕ ವೈರಲ್ ಆಗಿದೆ. ಮಸಿ ಎರಚುವ ಘಟನೆಗೂ ಮುನ್ನ ಕೆಲವು ಪ್ರತಿಭಟನಾಕಾರರು ಪಿಂಪ್ರಿಯಲ್ಲಿ ಸಚಿವರ ಬೆಂಗಾವಲು ಪಡೆಗೆ ಕಪ್ಪು ಬಾವುಟ ಪ್ರದರ್ಶಿಸಲು ಯತ್ನಿಸಿದ್ದರು.
ಶುಕ್ರವಾರ ಔರಂಗಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮರಾಠಿಯಲ್ಲಿ ಮಾತನಾಡಿದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಪಾಟೀಲ್, ಅಂಬೇಡ್ಕರ್ ಮತ್ತು ಫುಲೆ ಅವರು ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರದ ಅನುದಾನವನ್ನು ಕೇಳಲಿಲ್ಲ, ಅವರು ಶಾಲೆ ಮತ್ತು ಕಾಲೇಜುಗಳನ್ನು ಪ್ರಾರಂಭಿಸಲು ಹಣವನ್ನು ಸಂಗ್ರಹಿಸಲು ಜನರಲ್ಲಿ “ಭಿಕ್ಷೆ” ಕೇಳಿದರು ಎಂದಿದ್ದರು.