Home ಟಾಪ್ ಸುದ್ದಿಗಳು ಬೆಳಗಾವಿ: ಇಂಗ್ಲಿಷ್ ಭಾಷೆಯ ಬ್ಯಾನರ್‌ಗಳನ್ನು ಖಾಕಿ ಸಮ್ಮುಖದಲ್ಲೇ ಹರಿದ ಕರವೇ ಕಾರ್ಯಕರ್ತರು

ಬೆಳಗಾವಿ: ಇಂಗ್ಲಿಷ್ ಭಾಷೆಯ ಬ್ಯಾನರ್‌ಗಳನ್ನು ಖಾಕಿ ಸಮ್ಮುಖದಲ್ಲೇ ಹರಿದ ಕರವೇ ಕಾರ್ಯಕರ್ತರು

ಬೆಳಗಾವಿ: ನಗರದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಬ್ಯಾನರ್‌ಗಳನ್ನು ಅಳವಡಿಸಿದ್ದಕ್ಕೆ ಕರವೇ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಪೊಲೀಸರ ಸಮ್ಮುಖದಲ್ಲೇ ಆಂಗ್ಲ ಭಾಷೆಯ ಬ್ಯಾನರ್ ಗಳನ್ನು ಹರಿದು ಹಾಕಿದ್ದಾರೆ.

ಆರಂಭದಲ್ಲಿ ನಗರದ ರಾಣಿ ಚೆನ್ನಮ್ಮ ವೃತ್ತದ ಬಳಿ ಇಂಗ್ಲಿಷ್ ಭಾಷೆಯಲ್ಲಿದ್ದ ಬ್ಯಾನರ್ ಗಳನ್ನು ತೆರವುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣದ ಕಾರ್ಯಕರ್ತರು ಧರಣಿ ನಡೆಸಿದ್ದಾರೆ. ಬಳಿಕ ಒಂದೊಂದೆ ಬ್ಯಾನರ್ ಗಳನ್ನು ಹರಿದು ಹಾಕಲು ಮುಂದಾಗಿದ್ದಾರೆ. ಈ ವೇಳೆ ಮುಂದಾದ ಕಾರ್ಯಕರ್ತರನ್ನು ಪೊಲೀಸರು ತಡೆಯಲು ನೋಡಿದರೂ ಪೊಲೀಸ್‌ ಪಡೆಯ ಮಧ್ಯೆಯೇ ಕೆಲವರು ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಇಂಗ್ಲಿಷ್ ಭಾಷೆಯ ಬ್ಯಾನರ್ ಗಳನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಕಪ್ಪು ಮಸಿ ಬಳಿಯಲು ತಂದಿದ್ದ ಬಾಟಲಿಗಳನ್ನು ಕರವೇ ಕಾರ್ಯಕರ್ತರಿಂದ ಕಿತ್ತುಕೊಳ್ಳಲು ಹೋಗಿದ್ದ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಕಪ್ಪು ಮಸಿ ಬಿದ್ದಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿ ಪೊಲೀಸರು ಮತ್ತು ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದಂತೆ ಎಚ್ಚತ್ತ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ವಾಹನದಲ್ಲಿ ಕರೆದೊಯ್ದಿದ್ದಾರೆ.

ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ ಮಾತನಾಡಿ, ಕರ್ನಾಟಕ ರಾಜ್ಯದ ಸುವರ್ಣ ಸಂಭ್ರಮ ಸಂದರ್ಭದಲ್ಲಿ ಎಲ್ಲಾ ಜಾಹೀರಾತು ಫಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಬಳಸುವಂತೆ ನಿಯಮವಿದ್ದರೂ ಕೂಡ ಪಾಲಿಕೆ ಅಧಿಕಾರಿಗಳು ಅಮಿಷಗಳಿಗೆ ಬಲಿಯಾಗಿ ಕನ್ನಡ ಕಗ್ಗೊಲೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಹಾಗಾಗಿ, ನಾವೇ ಆಂಗ್ಲ ಭಾಷೆಯಲ್ಲಿರುವ ಜಾಹೀರಾತು ಫಲಕಗಳನ್ನು ಕಿತ್ತು ಹಾಕುತ್ತಿದ್ದೇವೆ. ಮುಂದೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದರು‌.

Join Whatsapp
Exit mobile version