ಈ ವರ್ಷದಿಂದ ಆರಂಭವಾಗಲಿರುವ ಮಹಿಳಾ ಐಪಿಎಲ್ ಪಂದ್ಯಗಳ ಪ್ರಸಾರ ಹಕ್ಕು 951 ಕೋಟಿ ರೂಪಾಯಿಗೆ ಮಾರಾಟವಾಗಿದೆ.
ಮುಂದಿನ 5 ವರ್ಷಗಳ (2023-27) ಅವಧಿಯಲ್ಲಿನ ಪಂದ್ಯಗಳ ಹಕ್ಕು ನೆಟ್’ವರ್ಕ್ 18 ಮಾಲಕತ್ವದ ವಯಾಕಾಮ್ 18 ಪಾಲಾಗಿದೆ. ದಿಗ್ಗಜ ಸಂಸ್ಥೆಗಳಾದ ಡಿಸ್ನಿ ಸ್ಟಾರ್, ಸೋನಿ ಹಾಗೂ ಝೀ ಅನ್ನು ಹಿಂದಿಕ್ಕಿ ವಯಾಕಮ್ 951 ಕೋಟಿ ರೂಪಾಯಿಗೆ ಪ್ರಸಾರದ ಹಕ್ಕನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಪ್ರತಿ ಪಂದ್ಯದಿಂದ ಬಿಸಿಸಿಐ 7.09 ಕೋಟಿ ಆದಾಯ ಗಳಿಸಲಿದೆ. ಪುರುಷರ ಐಪಿಎಲ್’ನ ಡಿಜಿಟಲ್ ಹಕ್ಕು ಹೊಂದಿರುವ ವಯಾಕಾಮ್ 18, ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಎಸ್‌ಎ20 ಲೀಗ್’ನ ಡಿಜಿಟಲ್ ಹಕ್ಕುಗಳನ್ನು ಸಹ ಹೊಂದಿದೆ.
ಈ ಕುರಿತು ಟ್ವಿಟರ್‌ನಲ್ಲಿ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ʻ ಸಮಾನ ಪಾವತಿ ನಿರ್ಧಾರದ ಬಳಿಕ, ಇದು ಐತಿಹಾಸಿಕ ಸಂಗತಿ ಎಂದು ಬಣ್ಣಿಸಿದ್ದಾರೆ. ಮಹಿಳಾ ಐಪಿಎಲ್’ನ ಮಾಧ್ಯಮ ಹಕ್ಕುಗಳನ್ನು ಖರೀದಿಸಿದ್ದಕ್ಕಾಗಿ ವಯಾಕಾಮ್ 18 ಗೆ ಅಭಿನಂದನೆಗಳು. ಬಿಸಿಸಿಐ ಮತ್ತು ಮಹಿಳಾ ತಂಡದ ಮೇಲೆ ನಂಬಿಕೆಯನ್ನು ಇರಿಸಿದ್ದಕ್ಕಾಗಿ ಧನ್ಯವಾದಗಳು. ಮಹಿಳಾ ಐಪಿಎಲ್ ಡಿಜಿಟಲ್ ಹಕ್ಕುಗಳಿಗೆ ವಯಾಕಾಮ್ 18 ಸಂಸ್ಥೆ 951 ಕೋಟಿಗೆ ಬಿಡ್ ಮಾಡಿದೆ. ಅಂದರೆ ಮುಂದಿನ ಐದು ವರ್ಷಗಳವರೆಗೆ ಪ್ರತಿ ಪಂದ್ಯಕ್ಕೆ 7.09 ಕೋಟಿ ರೂ.ಗಳನ್ನು ಬಿಸಿಸಿಐಗೆ ವಯಾಕಾಮ್ ನೀಡಲಿದೆ. ಮಹಿಳಾ ಕ್ರಿಕೆಟ್‌ಗೆ ಇದೊಂದು ಮಹತ್ವದ ಹೆಜ್ಜೆ. ಮಹಿಳಾ ಐಪಿಎಲ್ ಹೊರತಾಗಿ, ಐಪಿಎಲ್’ನ ಡಿಜಿಟಲ್ ಹಕ್ಕುಗಳು ಸಹ ಈ ಕಂಪನಿಗೆ ಸೇರಿವೆ ಎಂದಿದ್ದಾರೆ. ಹೊಸ ಯುಗದ ಆರಂಭ ಎಂದು ಕರೆದಿರುವ ಶಾ, ಭಾರತದಲ್ಲಿ ಮಹಿಳಾ ಕ್ರಿಕೆಟ್’ನ ಸಬಲೀಕರಣಕ್ಕೆ ದೊಡ್ಡ ಮತ್ತು ಅತ್ಯಂತ ಮಹತ್ವದ ಹೆಜ್ಜೆ ಎಂದಿದ್ದಾರೆ. ಎಲ್ಲಾ ವಯಸ್ಸಿನ ಮಹಿಳಾ ಕ್ರಿಕೆಟ್ ಆಟಗಾತಿಯರಿಗೆ ಮಹಿಳಾ ಐಪಿಎಲ್ ವೇದಿಕೆ ನೀಡಲಿದೆ ಎಂದು ಶಾ ಹೇಳಿದ್ದಾರೆ.
ಮಹಿಳಾ ಐಪಿಎಲ್‌ನ ಪ್ರಸಾರದ ಹಕ್ಕುಗಳ ಹರಾಜಿನ ಮೂಲ ಬೆಲೆಯನ್ನು, 10 ಲಕ್ಷದಿಂದ ರೂ. 50 ಲಕ್ಷದವರೆಗೆ ಐದು ವಿಭಾಗಗಳಾಗಿ ವಿಂಗಡಿಸಲಾಗಿತ್ತು.