Home ಟಾಪ್ ಸುದ್ದಿಗಳು ಸುಪ್ರೀಂಕೋರ್ಟ್ ಆದೇಶದಂತೆ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸಬೇಕು: ರಾಮಲಿಂಗಾ ರೆಡ್ಡಿ

ಸುಪ್ರೀಂಕೋರ್ಟ್ ಆದೇಶದಂತೆ ತಕ್ಷಣ ಬಿಬಿಎಂಪಿ ಚುನಾವಣೆ ನಡೆಸಬೇಕು: ರಾಮಲಿಂಗಾ ರೆಡ್ಡಿ

ಬೆಂಗಳೂರು: ದೇಶದ ಎಲ್ಲ ರಾಜ್ಯಗಳಲ್ಲೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಆದೇಶ ನೀಡಿದೆ. ನ್ಯಾಯಾಲಯದ ಆದೇಶಕ್ಕೆ ಯಾವುದೇ ಸಬೂಬು ಹೇಳದೆ ಆದಷ್ಟು ಬೇಗ ಬಿಬಿಎಂಪಿ ಚುನಾವಣೆ ನಡೆಸಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾ ರೆಡ್ಡಿ ಒತ್ತಾಯಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬೆಂಗಳೂರು ಮಹಾನಗರ ಪಾಲಿಕೆ ವಾರ್ಡ್ ಗಳ ಮರುವಿಂಗಡನೆ ಮಾಡುತ್ತೇವೆ, ಹೊಸ ಪ್ರದೇಶಗಳನ್ನು ಸೇರ್ಪಡೆ ಮಾಡುತ್ತೇವೆ ಎಂದು ಹೇಳಿತ್ತು. ಆಗ ನಾವು ಕೂಡ ಸರ್ಕಾರಕ್ಕೆ ಸಹಕಾರ ಕೊಟ್ಟೆವು. ಇದಕ್ಕಾಗಿ ರಘು ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಆ ಸಮಿತಿ ವರದಿಯನ್ನು ತರಾತುರಿಯಲ್ಲಿ ಅಂಗೀಕಾರ ಮಾಡಿದರು. ನಾವು ಕೊಟ್ಟ ಸಲಹೆ ಸೂಚನೆಗಳನ್ನು ಪರಿಗಣಿಸಲಿಲ್ಲ. ಯಾವುದೇ ನೂತನ ಪ್ರದೇಶ ಸೇರಿಸಲಿಲ್ಲ. ಇದರ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಆಮೂಲಕ 1 ವರ್ಷ 8 ತಿಂಗಳು ಪಾಲಿಕೆ ಚುನಾವಣೆ ಮುಂದೂಡಿದರು ಎಂದು ಹೇಳಿದರು.


ಅವರಿಗೆ ಚುನಾವಣೆ ಮಾಡುವ ಮನಸ್ಸು ಇದ್ದಿದ್ದರೆ ಇದು ದೊಡ್ಡ ಕೆಲಸವಾಗಿರಲಿಲ್ಲ. ಆರು ತಿಂಗಳಲ್ಲಿ ಮಾಡಬಹುದಿತ್ತು. ಚುನಾವಣೆ ಮಾಡದೆ ಅದನ್ನು ಮುಂದೂಡುವುದು ಇವರ ಉದ್ದೇಶವಾಗಿತ್ತು. ಬೆಂಗಳೂರು ಆಯುಕ್ತರು ಮರು ವಿಂಗಡಣೆ ಮಾಡಬೇಕಿತ್ತು. ಆದರೆ ಅವರು ಈ ವಿಚಾರವಾಗಿ ಒಂದೇ ಒಂದು ಸಭೆ ಮಾಡಲಿಲ್ಲ. ಜನಪ್ರತಿನಿಧಿಗಳ, ಸಾರ್ವಜನಿಕರ ಅಭಿಪ್ರಾಯ ಪಡೆಯಲಿಲ್ಲ. ಈ ವಾರ್ಡ್ ವಿಂಗಡಣೆ ಪ್ರಕ್ರಿಯೆ ಬಿಜೆಪಿ ಸಂಸದರ, ಶಾಸಕರ ಕಚೇರಿ ನಾಯಕರ ಕಚೇರಿಯಲ್ಲಿ ಮಾಡಲಾಗಿತ್ತು. ಈ ಬಗ್ಗೆ ನಾವು ಪ್ರತಿಭಟನೆ ಮಾಡಿದ್ದೆವು. ಇನ್ನು ಒಬಿಸಿ ಮೀಸಲಾತಿ ವಿಚಾರ ಇದ್ದ ಕಾರಣ ಅದನ್ನು ಮುಂದಿಟ್ಟುಕೊಂಡು ಸರ್ಕಾರ ಪಂಚಾಯ್ತಿ ಹಾಗೂ ಪಾಲಿಕೆ ಚುನಾವಣೆ ಮುಂದೂಡಿತು. ಸುಪ್ರೀಂ ಕೋರ್ಟ್ ನಾಲ್ಕು ದಿನಗಳ ಹಿಂದೆ ಮುಂಬೈ ಪಾಲಿಕೆ ಹಾಗೂ ಮಹಾರಾಷ್ಟ್ರ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾಡಲು ಸೂಚಿಸಿತು. ನಾನು ಆನೇಕಲ್ ನಲ್ಲಿ ಸಧ್ಯದಲ್ಲಿ ಪಾಲಿಕೆ ಚುನಾವಣೆ ಮಾಡಲು ಆದೇಶ ಬರಲಿದೆ ಎಂದಿದ್ದೆ. ಅದೇ ರೀತಿ ಇಂದು ಆದೇಶ ಬಂದಿದೆ. ಇಡೀ ದೇಶದ ಎಲ್ಲ ರಾಜ್ಯಗಳ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಸುಪ್ರೀಂ ಕೋರ್ಟ್ ಚುನಾವಣಾ ಆಯೋಗಕ್ಕೆ ಸೂಚನೆ ನೀಡಿದೆ.


ಬಿಜೆಪಿ ಚುನಾವಣೆ ತಡ ಮಾಡಿದ್ದಕ್ಕೆ ಒಬಿಸಿಗೆ ಅನ್ಯಾಯ ಆಗಿದೆ. ಒಬಿಸಿ ಅವರು ಈಗ ಸಾಮಾನ್ಯ ವರ್ಗದಲ್ಲಿ ಸ್ಪರ್ಧಿಸಬೇಕು ಎಂದು ತಿಳಿಸಿದೆ. ಸರ್ಕಾರ 20 ತಿಂಗಳು ತಡ ಮಾಡಿದ ಪರಿಣಾಮ ನಗರದ ಅಭಿವೃದ್ಧಿ ಕುಂಠಿತ ಆಗಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಆಗಿದ್ದ ಕಾರ್ಯಗಳು ಹಿನ್ನಡೆ ಆದವು. ನಗರದ ರಸ್ತೆಗಳಲ್ಲಿ ಲಕ್ಷಾಂತರ ಗುಂಡಿಗಳು ಬಿದ್ದವು. ಗುತ್ತಿಗೆದಾರರ ಬಿಲ್ ಪಾವತಿ ಆಗುತ್ತಿಲ್ಲ, ಟೆಂಡರ್ ಗಳಲ್ಲಿ ಅಕ್ರಮ ಆಗುತ್ತಿದೆ ಎಂದು ರಾಮಲಿಂಗಾ ರೆಡ್ಡಿ ಹೇಳಿದರು.


ಸಿದ್ದರಾಮಯ್ಯ ಅವರ ಸರ್ಕಾರ ಅವಧಿಯಲ್ಲಿ ಕಾಂತರಾಜು ಅವರ ಅಧ್ಯಕ್ಷತೆಯಲ್ಲಿ ಆಯೋಗ ಮಾಡಿ ಒಬಿಸಿ ಕುರಿತ ಅಂಕಿ ಅಂಶ ಕೊಟ್ಟಿದ್ದರು. ಆದರೆ ಸರ್ಕಾರ ಅದನ್ನು ಒಪ್ಪಲಿಲ್ಲ. ಒಪ್ಪಿದ್ದರೆ ಯಾವಾಗಲೋ ಒಬಿಸಿಗೆ ಮೀಸಲಾತಿ ನೀಡಬಹುದಿತ್ತು. ಅಥವಾ ಕೂಡಲೇ ಚುನಾವಣೆ ಮಾಡಿದ್ದರೂ ಈ ವರ್ಗಕ್ಕೆ ಮೀಸಲಾತಿ ದೊರೆಯುತ್ತಿತ್ತು. ಸುಪ್ರೀಂ ಕೋರ್ಟ್ ಆದೇಶದಂತೆ ಚುನಾವಣೆ ನಡೆಯಬೇಕು. ನ್ಯಾಯಾಲಯ ತನ್ನ ತೀರ್ಪಿನಲ್ಲಿ, ರಾಜ್ಯ ಸರ್ಕಾರ ವಾರ್ಡ ಮರು ವಿಂಗಡಣೆ ಮಾಡದಿದ್ದರೆ, ಕಳೆದ ಚುನಾವಣೆಯಲ್ಲಿ ಇದ್ದ ವಾರ್ಡ್ ಗಳಿಗೆ ಚುನಾವಣೆ ನಡೆಸಬೇಕು. ಇನ್ನು ಒಬಿಸಿ ವರ್ಗಕ್ಕೆ ಸಾಮಾನ್ಯ ವರ್ಗದಲ್ಲಿ ಅವಕಾಶ ನೀಡಬೇಕು. ದೇಶದ ಎಲ್ಲ ರಾಜ್ಯಗಳಲ್ಲೂ ಈ ಚುನಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿದೆ.


ನ್ಯಾಯಾಲಯದ ಆದೇಶಕ್ಕೆ ಯಾವುದೇ ಸಬೂಬು ಹೇಳದೆ ಚುನಾವಣೆ ನಡೆಸಬೇಕು ಎಂದು ರಾಮಲಿಂಗಾ ರೆಡ್ಡಿ ಒತ್ತಾಯಿಸಿದರು.
243 ವಾರ್ಡ್ ವಿಚಾರವಾಗಿ ಇದ್ದ ನ್ಯಾಯಾಲಯ ಅರ್ಜಿ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಹೈಕೋರ್ಟ್ ತೀರ್ಪಿಗೆ ತಡೆಯಜ್ಞೆ ನೀಡಿತ್ತು ಆದರೆ ಆ ಬಗ್ಗೆ ಚರ್ಚೆ ಮಾಡಿರಲಿಲ್ಲ. ಈಗ ಹೈಕೋರ್ಟ್ ಕಳೆದ ಬಾರಿ ಚುನಾವಣೆ ಮಾಡಿದ ವಾರ್ಡ್ ಗಳಿಗೆ ಚುನಾವಣೆ ಮಾಡಬೇಕು ಎಂದು ಸ್ಪಷ್ಟವಾಗಿ ಆದೇಶ ನೀಡಿರುವ ಪರಿಣಾಮ ಈಗ ಮರು ವಿಂಗಡಣೆ ಎಲ್ಲವೂ ಅಸಿಂಧುವಾಗಿವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗ ರೆಡ್ಡಿ ಹೇಳಿದರು.

Join Whatsapp
Exit mobile version