ಆರ್. ಅಶೋಕ್ ಕಚೇರಿ ಸಮೀಪದಲ್ಲಿರುವ ಗಣಪತಿ ದೇವಸ್ಥಾನದ ಕಟ್ಟಡ ಕೆಡವಿದ ಬಿಬಿಎಂಪಿ : ಅಪಾರ್ಟ್ ಮೆಂಟ್ ನಿರ್ಮಿಸಲು ಭೂ ಮಾಫಿಯಾದಿಂದ ದೇವಸ್ಥಾನಕ್ಕೆ ಧಕ್ಕೆ

Prasthutha: June 23, 2021

ಬೆಂಗಳೂರು: ಭೂ ಮಾಫಿಯಾದೊಂದಿಗೆ ಶಾಮೀಲಾಗಿರುವ ಬಿಬಿಎಂಪಿ ಅಧಿಕಾರಿಗಳು, 40 ವರ್ಷಗಳಿಂದ ಭವ್ಯವಾಗಿ ನೆಲೆ ನಿಂತಿರುವ ದೇವಸ್ಥಾನದ ಜಾಗವನ್ನು ಅಪಾರ್ಟ್ ಮೆಂಟ್ ಕಟ್ಟಲು ಕೆಡವಿರುವ ಘಟನೆ ವರದಿಯಾಗಿದೆ.
ಕಂದಾಯ ಸಚಿವ ಆರ್. ಅಶೋಕ್ ಅವರ ಕಚೇರಿ ಸಮೀಪದ ಬನಶಂಕರಿ ಎರಡನೇ ಹಂತದ ಯಾರಬ್ ನಗರದ 9 ನೇ ಮುಖ್ಯರಸ್ತೆಯಲ್ಲಿ ನಾಲ್ಕು ದಶಕಗಳ ಹಿಂದೆ ಗಣಪತಿ ದೇವಸ್ಥಾನ ನಿರ್ಮಿಸಲಾಗಿದೆ. ದೇವಾಲಯದ ಹಿಂಬಾಗದಲ್ಲಿ 40 ವರ್ಷಗಳ ಹಿಂದೆಯೇ ಪ್ರಸಾದ ಮಂದಿರವನ್ನು ನಿರ್ಮಿಸಲಾಗಿದೆ. ಅಲ್ಲಿಂದ ಇಲ್ಲಿಯವರೆಗೆ ದೇವಸ್ಥಾನದ ಜಾಗ ಯಾವುದೇ ಸಮಸ್ಯೆ ಇಲ್ಲದೇ ನಡೆದುಕೊಂಡು ಬರುತ್ತಿದೆ.


ಈ ಪ್ರಸಾದ ಮಂದಿರವನ್ನು ತೆರವುಗೊಳಿಸಿ ಜಾಗವನ್ನು ತಮ್ಮ ವಶಕ್ಕೆ ನೀಡುವಂತೆ ಪಕ್ಕದಲ್ಲಿ ಅಪಾರ್ಟ್ ಮೆಂಟ್ ನಿರ್ಮಿಸುತ್ತಿರುವ ಕೆಲವು ಪ್ರಭಾವಿಗಳು ದೇವಸ್ಥಾನದ ಟ್ರಸ್ಟಿಗಳ ಮೇಲೆ ವ್ಯಾಪಕ ಒತ್ತಡ ಹೇರಿದ್ದರು. ಆದರೆ ಇದಕ್ಕೆ ಆಡಳಿತ ಮಂಡಳಿ ಒಪ್ಪಿರಲಿಲ್ಲ.
ಇದೀಗ ಬಿಬಿಎಂಪಿ ಅಧಿಕಾರಿಗಳನ್ನು ಬುಟ್ಟಿಗೆ ಹಾಕಿಕೊಂಡು ಕೋವಿಡ್ ಸಂದರ್ಭದಲ್ಲಿ ಅತ್ಯಂತ ವ್ಯವಸ್ಥಿತವಾಗಿ ದೇವಸ್ಥಾನದ ಪ್ರಸಾದ ಮಂದಿರವನ್ನು ಕೆಡವಿದ್ದಾರೆ. ಇದನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ ಎಂದು ಹೇಳಿ ದೇವಸ್ಥಾನದ ಜಾಗಕ್ಕೆ ಹಾನಿ ಮಾಡಿ ಧಾರ್ಮಿಕ ಭಾವನೆಗಳನ್ನು ಧ್ವಂಸಗೊಳಿಸಿದ್ದಾರೆ. ಇಲ್ಲಿನ ನಾಗರಕಟ್ಟೆಗೂ ಸಹ ಹಾನಿಯಾಗಿದ್ದು, ಸಾರ್ವಜನಿಕರು ಬಳಸುವ ಶುದ್ಧ ಕುಡಿಯುವ ನೀರಿನ ಘಟಕವನ್ನು ಸಹ ತೆರವುಮಾಡುವ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಅರಳಿ ಮರ ಸೇರಿ ಇಡೀ ವಾತಾವರಣದ ಬಗ್ಗೆ ಸುತ್ತಮುತ್ತಲಿನ ಜನರಿಗೆ ವಿಶೇಷ ಗೌರವ ಮತ್ತು ಹೆಮ್ಮೆ ಇದೆ. ಬಿಬಿಎಂಪಿ ವರ್ತನೆ ಬಗ್ಗೆ ಆಕ್ರೋಶಗೊಂಡ ಸ್ಥಳೀಯರು ಗುಂಪು ಗೂಡಿ ಗಲಾಟೆ ಮಾಡಿದ ಕಾರಣ ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ಇಂದು ಅಲ್ಲಿಂದ ಪಲಾಯನ ಮಾಡಿದ್ದಾರೆ.


ಇಲ್ಲಿ ವಿನಾಯಕ ದೇವಸ್ಥಾನವಿದ್ದು, ಸತ್ಯನಾರಾಯಣ ಪೂಜೆ, ಸಂಕಷ್ಟ ಚತುರ್ಥಿ, ಗಣೇಶ ಚತುರ್ಥಿ, ವರ್ಷಕ್ಕೆ ಒಮ್ಮೆ ದೇವಸ್ಥಾನದ ವಾರ್ಷಿಕೋತ್ಸವವನ್ನು ಸಹ ಆಚರಿಸಲಾಗುತ್ತಿದೆ. ಸುತ್ತಮುತ್ತಲಿನವರಿಗೆ ಇದು ವಿಘ್ಹ ನಿವಾರಕ ಸ್ಥಳವಾಗಿದ್ದು, ಹಲವಾರು ಭಕ್ತಾದಿಗಳು ಭಕ್ತಿ, ಭಾವದಿಂದ ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಬಿಬಿಎಂಪಿ ಅಧಿಕಾರಿಗಳು ಭಕ್ತಾದಿಗಳ ಭಾವನೆಗೆ ಕೊಡಲಿಪೆಟ್ಟು ನೀಡಿರುವುದಾಗಿ ಭಕ್ತರು ಆಕ್ರೋಶಗೊಂಡಿದ್ದಾರೆ.

ವಿನಾಯಕ ದೇವಸ್ಥಾನದ ಟ್ರಸ್ಟ್ ನ ಅಧ್ಯಕ್ಷರು ಡಾ. ಎಂ.ಆರ್. ಸಾಕೇತ್ ಕುಮಾರ್ ಈ ಕುರಿತು ಮಾಹಿತಿ ನೀಡಿ, ನಮ್ಮ ಹಿರಿಯರು ಈ ದೇವಸ್ಥಾನ ಕಟ್ಟಿಸಿದ್ದು, ಹಲವಾರು ಮಂದಿ ಇದರ ಆಡಳಿತ ಮಂಡಳಿಯ ಉಸ್ತುವಾರಿ ನೋಡಿಕೊಂಡು ಬಂದಿದ್ದಾರೆ. ಇದೀಗ ತಮ್ಮ ಕಾಲದಲ್ಲಿ ಪ್ರಸಾದ ಮಂದಿರದ ಜಾಗವನ್ನು ತಮಗೆ ಒಪ್ಪಿಸುವಂತೆ ಅಪಾರ್ಟ್ ಮೆಂಟ್ ನವರು ಒತ್ತಡ ಹೇರಿದ್ದರು. ಆದರೆ ನಾವು ಒಪ್ಪಿರಲಿಲ್ಲ. ಇದೀಗ ಕೋವಿಡ್ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳನ್ನು ಮುಂದಿಟ್ಟುಕೊಂಡು ನಮ್ಮ ಭಾವನೆಗಳ ಜತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಆರೋಪಿಸಿದರು.


ಜಾಗ ತೆರವು ಮಾಡುವಂತೆ ನೋಟಿಸ್ ನೀಡಿರುವುದಾಗಿ ಬಿಬಿಎಂಪಿ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಮಗೆ ನೋಟಿಸ್ ತಲುಪಿಲ್ಲ. 40 ವರ್ಷಗಳಿಂದ ನಮಗೆ ಯಾವುದೇ ನೋಟಿಸ್ ನೀಡಿಲ್ಲ. ಈ ಜಾಗ ಎಂದೂ ವಿವಾದಕ್ಕೀಡಾಗಿರಲಿಲ್ಲ. ಇದೀಗ ಏಕಾಏಕಿ ಇವೆಲ್ಲಾ ಘಟನೆಗಳು ನಡೆಯುತ್ತಿವೆ. ಬಿಬಿಎಂಪಿ ಅಧಿಕಾರಿಗಳ ವರ್ತನೆ ಖಂಡನೀಯ ಎಂದು ಡಾಕ್ಟರ್ ಎಂ.ಆರ್. ಸಾಕೇತ್ ಕುಮಾರ್ ಹೇಳಿದರು.


ಸ್ಥಳೀಯರಾದ ವೆಂಕಟೇಶ್ ಮಾತನಾಡಿ, ಇದೆಲ್ಲವೂ ವಸತಿ ಸಮುಚ್ಚಯದವರ ಕಿತಾಪತಿಯಾಗಿದ್ದು, ದೇವಸ್ಥಾನದ ಜಾಗ ಕೆಡವಿರುವುದು ಅಕ್ಷ್ಯಮ್ಯ. ಈ ಜಾಗ ಸಚಿವ ಆರ್. ಅಶೋಕ್ ಅವರ ಮನೆಗೆ ಕೂಗಳತೆ ದೂರದಲ್ಲಿದ್ದು, ಸರ್ಕಾರ ಮಧ್ಯ ಪ್ರವೇಶ ಮಾಡಿ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವುದನ್ನು ತಡೆಯಬೇಕು. ಹಣದ ಆಸೆಗೆ ಶಾಮೀಲಾಗಿರುವ ಬಿಬಿಎಂಪಿ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ