Home ಟಾಪ್ ಸುದ್ದಿಗಳು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆ

ಬೆಂಗಳೂರು: ಬಿಜೆಪಿ ಪಕ್ಷದ ಆಂತರಿಕ ಕಚ್ಚಾಟದಿಂದ ಹೈಕಮಾಂಡ್ ಆದೇಶದ ಮೇರೆಗೆ ಒತ್ತಡದಿಂದ ರಾಜೀನಾಮೆ ನೀಡಿದ್ದ ಬಿ ಎಸ್ ಯಡಿಯೂರಪ್ಪ ಅವರ ಸ್ಥಾನಕ್ಕೆ ಕರ್ನಾಟಕದ 30ನೇ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿಯವರನ್ನು ಆಯ್ಕೆ ಮಾಡಲಾಗಿದೆ. ಜುಲೈ 26ರಂದು ರಾಜ್ಯ ಸರಕಾರ ಎರಡು ವರ್ಷದ ಅವಧಿ ಪೂರ್ತಿಗೊಳಿಸಿದ್ದ ಸಭೆಯ ವೇದಿಕೆಯಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಘೋಷಣೆ ಮಾಡಿದ್ದರು. ಆ ಬಳಿಕ ರಾಜ್ಯ ರಾಜಕೀಯ ಗರಿಗೆದರಿತ್ತು.

ಬೆಂಗಳೂರಿನಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕೇಂದ್ರದಿಂದ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರ ಸಚಿವರಾದ ಧರ್ಮೇಂದ್ರ ಪ್ರಧಾನ್ ಮತ್ತು ಕಿಶನ್ ರೆಡ್ಡಿ, ಪಕ್ಷದ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ಸಮ್ಮುಖದಲ್ಲಿ ಈ ನೇಮಕ ನಡೆದಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಬೊಮ್ಮಾಯಿಯವರ ಹೆಸರನ್ನು ಪ್ರಸ್ತಾಪಿಸಿದರೆ, ಅರವಿಂದ ಕಾರಜೋಳ ಅದನ್ನು ಅನುಮೋದಿಸಿದ್ದಾರೆ.

2018ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜನರಿಂದ ಆಯ್ಕೆಯಾಗಿದ್ದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ‘ಅಪರೇಶನ್ ಕಮಲ’ವೆಂಬ ಭ್ರಷ್ಟಾಚಾರದ ಮೂಲಕ 2019ರಲ್ಲಿ ಕೆಡವಿ ಹಾಕಿದ್ದ ಬಿಜೆಪಿ, ಆ ಬಳಿಕ ಯಡಿಯೂರಪ್ಪ ನೇತೃತ್ವದಲ್ಲಿ ಸರಕಾರ ರಚಿಸಿತ್ತು. ನಂತರ ಒಂದಲ್ಲ ಒಂದು ಕಾರಣಕ್ಕಾಗಿ ಬಿಜೆಪಿಯ ಆಂತರಿಕ ಕಚ್ಚಾಟ ಬಹಿರಂಗಗೊಳ್ಳುತ್ತಲೇ ಇತ್ತು. ಮಾತ್ರವಲ್ಲ ಯಡಿಯೂರಪ್ಪನವರನ್ನು ಕೆಳಗಿಳಿಸುವಂತೆ ಬಿಜೆಪಿಯ ಹಲವು ಮುಖಂಡರು ಬಹಿರಂಗವಾಗಿ ಆಗ್ರಹಿಸುತ್ತಲೇ ಇದ್ದರು. ಇದೀಗ ಹೊಸ ಮುಖ್ಯಮಂತ್ರಿಯ ಘೋಷಣೆಯೊಂದಿಗೆ ತಾತ್ಕಾಲಿಕವಾಗಿ ಆ ಭಿನ್ನಮತ ಶಮನಗೊಂಡಿದೆ ಎನ್ನಲಾಗಿದೆ.

ಹಿರಿಯ ಜನತಾ ದಳ ಮುಖಂಡ ಮಾಜಿ ಮುಖ್ಯಮಂತ್ರಿ ಎಸ್ ಆರ್ ಬೊಮ್ಮಾಯಿ ಅವರ ಮಗನಾಗಿರುವ  ಬಸವರಾಜ್ ಬೊಮ್ಮಾಯಿಯವರು  ಧಾರವಡ ಮೂಲದವರು. ಯಡಿಯೂರಪ್ಪನವರ ಸಂಪುಟದಲ್ಲಿ ಗೃಹ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದರು.  61 ವರ್ಷ ವಯಸ್ಸಿನ ಅವರು  ಇಂಜಿನಿಯರ್  ಪದವೀಧರರಾಗಿದ್ದಾರೆ.  ಮಾತ್ರವಲ್ಲ ಅವರು ಕೃಷಿಕರು ಮತ್ತು ಕೈಗಾರಿಕೋದ್ಯಮಿಯೂ ಆಗಿದ್ದಾರೆ .  1998 ಮತ್ತು 2004 ರಲ್ಲಿ ಎರಡು ಬಾರಿ ಜನತಾ ದಳದಿಂದ ಶಾಸಕರಾಗಿ ಆಯ್ಕೆಯಾಗಿದ್ದರು. 2008 ರಲ್ಲಿ ಜನತಾ ದಳ ತೊರೆದು ಬಿಜೆಪಿ ಪಕ್ಷ ಸೇರಿ ಹಾವೇರಿ ಜಿಲ್ಲೆಯ ಶಿಗ್ಗಾಂವ್ ವಿಧಾನಸಭಾ  ಕ್ಷೇತ್ರದಿಂದ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾದರು.

Join Whatsapp
Exit mobile version