Home ಕರಾವಳಿ ಬ್ಯಾರಿಗಳು ಉದ್ಯೋಗ ಕೇಳುವವರಾಗದೆ ಉದ್ಯೋಗ ನೀಡುವವರಾಗಬೇಕು: ಟಿ.ಕೆ. ಉಮರ್

ಬ್ಯಾರಿಗಳು ಉದ್ಯೋಗ ಕೇಳುವವರಾಗದೆ ಉದ್ಯೋಗ ನೀಡುವವರಾಗಬೇಕು: ಟಿ.ಕೆ. ಉಮರ್

ಬೆಂಗಳೂರು: ಬ್ಯಾರಿ ಸಮುದಾಯದ ಯುವಕರು ಆರ್ಥಿಕವಾಗಿ ಸಬಲೀಕರಣಗೊಂಡು ಸಮುದಾಯದ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಖ್ಯಾತ ಉದ್ಯಮಿ ಟಿ.ಕೆ.ಉಮರ್ ಹೇಳಿದರು.


ಬೆಂಗಳೂರಿನಲ್ಲಿ ನೆಲೆಸಿರುವ ಬ್ಯಾರಿ ಸಮುದಾಯದ ಸಣ್ಣ ಉದ್ಯಮಿಗಳು-ವ್ಯಾಪಾರಿಗಳು ಹಾಗೂ ವಿವಿಧ ರೀತಿಯ ವ್ಯವಹಾರಗಳನ್ನು ನಡೆಸುವ ಬ್ಯಾರಿಗಳನ್ನು ಸಂಘಟಿಸಿ ಅವರನ್ನು ಸಮುದಾಯದ ಪ್ರಗತಿಗೆ ಪೂರಕವಾದ ವಿವಿಧ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗುವಂತೆ ಉತ್ತೇಜಿಸುವ ಉದ್ದೇಶದಿಂದ ಬೆಂಗಳೂರಿನಲ್ಲಿ ಇತ್ತೀಚೆಗೆ ಬೆಂಗಳೂರು ಬ್ಯಾರೀಸ್ ಫಾರಂ ನ ಸದಸ್ಯರು ಸಂಘಟಿಸಿದ್ದ ‘ಇಫ್ತಾರ್ ಕೂಟ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಬ್ಯಾರಿ ಭವನದಲ್ಲಿ ನಡೆದ ಈ ಸಭೆಯಲ್ಲಿ ಫಾರಂನ ಸದಸ್ಯರು ತಮ್ಮ ಸಂಘಟನೆಯ ಧ್ಯೇಯೋದ್ದೇಶ ಹಾಗೂ ಯೋಜನೆಗಳ ಮಾಹಿತಿಯನ್ನು ಹಂಚಿಕೊಂಡರು.


ಬೆಂಗಳೂರಿನಲ್ಲಿ ವಾಸಿಸುವ ಬ್ಯಾರಿಗಳ ಸಮೀಕ್ಷೆಯನ್ನು ನಡೆಸಿ ಅವರಿಗೆ ನೆರವು-ಪ್ರೋತ್ಸಾಹ-ಸಹಯೋಗ ನೀಡುವ ಕೇಂದ್ರೀಕೃತ ಪದ್ದತಿಯನ್ನು ರೂಪಿಸುವುದು, ಬ್ಯಾರಿ ಸಮುದಾಯಕ್ಕೆ ಬೆಂಗಳೂರಿನ ಅವಕಾಶಗಳ ಬಗ್ಗೆ ಮಾರ್ಗದರ್ಶನ ನೀಡುವುದು, ಹೆಲ್ಪ್ ಸೆಂಟರ್ ನಿರ್ಮಿಸಿ ಆ ಮೂಲಕ ಅವರ ಬೇಡಿಕೆ ಮತ್ತು ತುರ್ತು ನೆರವುಗಳಿಗೆ ಸ್ಪಂದಿಸುವುದು, ಆರ್ಥಿಕ ಶಿಸ್ತು ಮತ್ತು ವ್ಯವಹಾರ ಹೊಣೆಗಾರಿಕೆಯ ಮಾದರಿಯನ್ನು ರೂಪಿಸುವುದು, ಶೈಕ್ಷಣಿಕವಾಗಿ ಅಗತ್ಯ ಇರುವ ನೆರವನ್ನು, ಪ್ರೋತ್ಸಾಹ ಮತ್ತು ಸೂಚನೆಗಳನ್ನು ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.


ಯುವ ನಾಯಕ ಸುಹೈಲ್ ಕಂದಕ್ ಮಾತನಾಡಿ, ಬ್ಯಾರಿ ಸಮುದಾಯ ಸಾಮಾಜಿಕ ಸೇವೆಯಲ್ಲಿ ಮುಂಚೂಣಿಯಲ್ಲಿದೆ. ಕೋವಿಡ್ ಸಂದರ್ಭದಲ್ಲಿ ಈ ಸಮುದಾಯದ ಸಮಾಜ ಸೇವಕರು ನಡೆಸಿದ ಸೇವಾ ಕಾರ್ಯ ಅದ್ವಿತೀಯ. ಈ ಕಾರ್ಯವನ್ನು ಇಂದಿಗೂ ಇತರ ಸಮುದಾಯದವರು ಸ್ಮರಿಸುತ್ತಿದ್ದಾರೆ. ಆದರೆ ನಮ್ಮ ಸಮುದಾಯ ರಾಜಕೀಯ ಕ್ಷೇತ್ರದಲ್ಲಿ ಹಿಂದಿರುವುದು ವಿಷಾದನೀಯ ಎಂದರು.
ನಮ್ಮಲ್ಲಿರುವ ಭಿನ್ನಾಭಿಪ್ರಾಯಗಳನ್ನು ಮರೆತು ಭಾಷೆಯ ಹೆಸರಿನಲ್ಲಾದರೂ ಒಗ್ಗಟ್ಟಾಗಿ ಸಮುದಾಯದ ರಾಜಕೀಯ ಪ್ರಗತಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಚಾರ್ಟರ್ಡ್ ಅಕೌಂಟೆಂಟ್ ನೌಫಲ್, ಬ್ಯಾರಿ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ, ಅದರ ಪರಿಹಾರೋಪಾಯಗಳನ್ನು ಸೂಚಿಸಿದರು.
ಹಿರಿಯ ಪತ್ರಕರ್ತ ಬಿ.ಎಂ.ಹನೀಫ್, ಅಡ್ವೊಕೇಟ್ ಮುಜಫ್ಫರ್, ಸಿ.ಎ. ಉಮರ್ ಮತ್ತಿತರರು ಉಪಸ್ಥಿತರಿದ್ದರು.


ಇದೇ ವೇಳೆ ಇತ್ತೀಚೆಗೆ ನೂತನವಾಗಿ ನೇಮಕಗೊಂಡ ಬ್ಯಾರಿ ಅಕಾಡೆಮಿ ಅಧ್ಯಕ್ಷ ಯು.ಎಚ್. ಉಮರ್ ಅವರನ್ನು ಸನ್ಮಾನಿಸಲಾಯಿತು.
ಬೆಂಗಳೂರು ಬ್ಯಾರೀಸ್ ಫಾರಂ ಅಧ್ಯಕ್ಷ ಇಸ್ಮಾಯಿಲ್, ಉಪಾಧ್ಯಕ್ಷ ಅಬ್ದುಲ್ ಗಫೂರ್, ಕಾರ್ಯದರ್ಶಿ ಮುಸ್ತಫಾ, ಸದಸ್ಯರಾದ ಹಾರೀಸ್ ಸುನ್ನತ್ ಕೆರೆ, ಎಸ್.ಕೆ. ಅಬ್ದುಲ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.

Join Whatsapp
Exit mobile version