ಬಂಟ್ವಾಳ: ಸರಕಾರಿ ಬಸ್ ರಸ್ತೆಯಲ್ಲಿ ಇದ್ದ ಹೊಂಡಕ್ಕೆ ಬಿದ್ದು ವ್ಯಕ್ತಿಯೋರ್ವ ಸೊಂಟ ಮುರಿದು, ಆಸ್ಪತ್ರೆಯಲ್ಲಿ ದಾಖಲಾದ ಘಟನೆ ಆ.17ರಂದು ನಡೆದಿದೆ.
ಬೆಳ್ಳಾರೆಯ ವಿಜಯ ಕುಮಾರ್ ಎನ್ನುವವರು ಸುಳ್ಯದಲ್ಲಿ ಮೊಬೈಲ್ ಅಂಗಡಿ ಇರಿಸಿಕೊಂಡಿದ್ದರು. ಇವರು ಕೆಲಸಕ್ಕೆಂದು ಮಂಗಳೂರಿಗೆ ಹೋಗಿ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತು ವಾಪಸ್ ಬೆಳ್ಳಾರೆಗೆ ಬರುತ್ತಿದ್ದರು. ರಾಷ್ಟ್ರೀಯ ಹೆದ್ದಾರಿ ಕಲ್ಲಡ್ಕ ಬಳಿ ರಸ್ತೆ ಅವ್ಯವಸ್ಥೆಯ ಕಾರಣ ಹಾಗೂ ರಸ್ತೆ ಗುಂಡಿಯಿಂದ ಕೂಡಿದ್ದರಿಂದ ಬಸ್ಸು ರಸ್ತೆಯ ಗುಂಡಿಗೆ ಬಿದ್ದಿದೆ. ಈ ಸಮಯದಲ್ಲಿ ಪ್ರಯಾಣಿಕ ವಿಜಯ ಕುಮಾರ್ ಅವರು ಬಸ್ಸಿನಲ್ಲಿ ಎತ್ತಿ ಹಾಕಿದ ಅನುಭವಾಗಿ ದೇಹದಲ್ಲಿ ಸೊಂಟದಿಂದ ಕೆಳಭಾಗದ ಸ್ಪರ್ಶಜ್ಞಾನ ಕಳೆದುಕೊಂಡಿದ್ದಾರೆ. ತಕ್ಷಣವೇ ವಿಜಯ್ ಅವರು ಬೊಬ್ಬೆ ಹೊಡೆದ ಬಳಿಕ ಬಸ್ಸು ನಿಲ್ಲಿಸಿದ ಚಾಲಕ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದ್ದು, ಅಲ್ಲಿಂದ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಿಸಿ ಪ್ರಸ್ತುತ ವಿಜಯಕುಮಾರ್ ಅವರನ್ನು ಕೆಎಂಸಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ವಿಜಯಕುಮಾರ್ ಅವರಿಗೆ ಬೆನ್ನುಹುರಿ ಹಾಗೂ ಕುತ್ತಿಗೆ ಸಮೀಪದ ಎಲುಬು ಜಖಂಗೊಂಡಿದೆ ಎಂದು ವೈದ್ಯರು ಹೇಳಿದ್ದಾರೆ.
ಈ ಬಗ್ಗೆ ಈಗಾಗಲೇ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಇನ್ನು ಮುಂದಕ್ಕೆ ತನಗಾದ ಸ್ಥಿತಿ ಇನ್ನೊಬ್ಬರಿಗೆ ಆಗಬಾರದು, ಕೂಡಲೇ ರಸ್ತೆಯನ್ನು ಈ ಸ್ಥಿತಿಗೆ ತಂದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧವೂ ಪ್ರಕರಣ ದಾಖಲಾಗಬೇಕು. ತನಗೆ ಈಗ ಸೊಂಟದಿಂದ ಕೆಳಗಡೆ ಸ್ವಾಧೀನ ಇಲ್ಲ.ಮುಂದಕ್ಕೆ ದುಡಿದು ನನ್ನ ಕುಟುಂಬವನ್ನು ಸಾಕಬಹುದು ಎಂಬ ಭರವಸೆಯೂ ಇಲ್ಲ ಎಂದು ಹೇಳಿದ್ದಾರೆ.