ಬಂಟ್ವಾಳ: ಸ್ನೇಹಿತರ ಜೊತೆ ನದಿಗೆ ಮೀನು ಹಿಡಿಯಲು ಹೋಗಿ ನೀರುಪಾಲಾಗಿದ್ದ ವ್ಯಕ್ತಿಯ ಮೃತದೇಹ ಶುಕ್ರವಾರ ಪತ್ತೆಯಾಗಿದೆ.
ಮೃತರನ್ನು ಮೈಕಲ್ (53) ಎಂದು ಗುರುತಿಸಲಾಗಿದೆ.
ಸುರತ್ಕಲ್ ನ ಸರಪಾಡಿ ಸಮೀಪದ ಮಾವಿನ ಕಟ್ಟೆ ಎಂಬಲ್ಲಿಂದ ನೆಂಟರ ಮನೆಗೆ ಬಂದ ವ್ಯಕ್ತಿಗಳು ಸೇರಿದಂತೆ ನಾಲ್ಕು ಮಂದಿ ಗುರುವಾರ ಸಂಜೆ ಗಾಳ ಹಾಕಿ ಮೀನು ಹಿಡಿಯಲು ಬಂಟ್ವಾಳದ ಅಜಿಲಮೊಗರು ಸಮೀಪದ ಕೂಟೇಲು ಸೇತುವೆಯ ಸಮೀಪದ ಕಿಂಡಿ ಅಣೆಕಟ್ಟಿಗೆ ಹೋಗಿದ್ದರು. ಈ ವೇಳೆ ಮೈಕಲ್ ಆಯತಪ್ಪಿ ನೀರಿಗೆ ಬಿದ್ದಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ರಾತ್ರಿ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದವರು ನದಿಯಲ್ಲಿ ಹುಡುಕುವ ಪ್ರಯತ್ನ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ. ಶುಕ್ರವಾರ ಬೆಳಿಗ್ಗೆ ನೇತ್ರಾವತಿ ನದಿಯಲ್ಲಿ ನೀರು ಇಳಿಕೆಯಾಗಿದ್ದು, ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.