ಬಂಟ್ವಾಳ ಪುರಸಭೆಯ ಅಧಿಕಾರಿಗಳಿಗೆ ಇನ್ನಾದರೂ ಜಿಲ್ಲಾಧಿಕಾರಿ ಚುರುಕು ಮುಟ್ಟಿಸಲಿ : ಪುರಸಭಾ ಸದಸ್ಯ ಮುನೀಶ್ ಅಲಿ ಆಗ್ರಹ

Prasthutha|

►ಕೊರೋನ ನಿಯಂತ್ರಣದಲ್ಲಿ ಬಂಟ್ವಾಳ ಪುರಸಭೆಯ ಅಧಿಕಾರಿಗಳಿಂದ ನಿರ್ಲಕ್ಷ್ಯ

- Advertisement -

ಬಂಟ್ವಾಳ : ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಗಳ ಜೊತೆ ಬಂಟ್ವಾಳ ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪುರಸಭಾ ವ್ಯಾಪ್ತಿಯಲ್ಲಿ ಕೊರೋನ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾಧಿಕಾರಿ ಈ ಎಲ್ಲಾ ಅಧಿಕಾರಿಗಳ ಸಭೆ ಕರೆಯುವ ಮೂಲಕ ಅವರಿಗೆ ಚುರುಕು ಮುಟ್ಟಿಸುವ ಕೆಲಸ ಇನ್ನಾದರೂ ಮಾಡಿ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಿಸಬೇಕು ಎಂದು ಬಂಟ್ವಾಳ ಪುರಸಭಾ ಸದಸ್ಯ ಮುನೀಶ್ ಅಲಿ ಆಗ್ರಹಿಸಿದ್ದಾರೆ.

ಪುರಸಭಾ ವ್ಯಾಪ್ತಿಯಲ್ಲಿ ಪ್ರತಿದಿನ 30ಕ್ಕೂ ಅಧಿಕ ಜನರಿಗೆ ಕೊರೋನ ಸೋಂಕು ದೃಢಪಡುತ್ತಿದ್ದು ಈಗಾಗಲೇ ಈ ಸೋಂಕಿಗೆ ಹಲವು ಮಂದಿ ಬಲಿಯಾಗಿದ್ದಾರೆ. ಆದರೆ ವೈರಸ್ ನಿಯಂತ್ರಣಕ್ಕೆ ಸಂಬಂಧಿಸಿ ಕೊರೋನ ಎರಡನೇ ಅಲೆ ಆರಂಭಗೊಂಡು ಈವರೆಗೆ ಪುರಸಭೆಯ ಅಧಿಕಾರಿಗಳಿಂದ ಒಂದೇ ಒಂದು ಸಭೆಯಾಗಲಿ, ಜಾಗೃತಿ ಕಾರ್ಯಕ್ರಮವಾಗಲಿ, ಯಾವುದೇ ಕ್ರಮವಾಗಲೀ ನಡೆಯದಿರುವುದು ಖೇದಕರವಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ಕಳೆದ ವರ್ಷ ಮೊದಲನೆಯ ಅಲೆಯ ಸಂದರ್ಭದಲ್ಲಿ ಕೂಡಾ ಬಂಟ್ವಾಳ ಪುರಸಭೆಯ ಅಧಿಕಾರಿಗಳು ಇದೇ ರೀತಿ ಯಾವುದೇ ಸಭೆ, ಜಾಗೃತಿ ಕಾರ್ಯಕ್ರಮ ನಡೆಸದೆ ನಿರ್ಲಕ್ಷ್ಯ ವಹಿಸಿದ್ದರು. ಅದರ ಪರಿಣಾಮವಾಗಿ ಪುರಸಭಾ ವ್ಯಾಪ್ತಿ ದಕ್ಷಿಣ ಕನ್ನಡ ಜಿಲ್ಲೆಯ ಕೊರೋನ ಹಾಟ್ ಸ್ಪಾಟ್ ಆಗಿ ಗುರುತಿಸಿತು. ಅಲ್ಲದೆ ಸರಣಿ ಸಾವು ಕೂಡಾ ಸಂಭವಿಸಿದೆ. ಈ ವರ್ಷವೂ ಮತ್ತೆ ಅದೇ ತಪ್ಪನ್ನು ಪುರಸಭೆಯ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಮುನೀಶ್ ಅಲಿ ಆರೋಪಿಸಿದ್ದಾರೆ‌.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ವೈರಸ್ ಹರಡುವುದನ್ನು ನಿಯಂತ್ರಿಸಲು ಪುರಸಭೆಯಿಂದ ಟಾಸ್ಕ್ ಫೋರ್ಸ್ ಸಮಿತಿ ರಚನೆ ಮಾಡಲೆಂದು ಕೆಲವು ಸದಸ್ಯರ ಹೆಸರು ಹಾಗೂ ಮೊಬೈಲ್ ಸಂಖ್ಯೆಯನ್ನು ಅಧಿಕಾರಿಗಳು ಪಡೆದಿದ್ದರು. ಆದರೆ ಆ ಬಳಿಕ ಸಮಿತಿಯೂ ರಚನೆ ಮಾಡಿಲ್ಲ, ಒಂದೇ ಒಂದು ಸಭೆಯೂ ಕರೆದಿಲ್ಲ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪುರಸಭೆಯ ಮಾಸಿಕ‌ ಸಭೆಯಲ್ಲಿ ಪ್ರಶ್ನಿಸಿದ್ದಕ್ಕೆ, ಪುರಸಭೆಯಲ್ಲಿ ಅಧಿಕಾರ ಇಲ್ಲದ ಹಿನ್ನೆಲೆಯಲ್ಲಿ ಸದಸ್ಯರ ಸಭೆ ಕರೆದಿಲ್ಲ ಎಂದು ಅಧಿಕಾರಿಗಳು ಸಬೂಬು ಹೇಳಿದ್ದರು. ಆದರೆ ಈ ಬಾರಿ ಚುನಾಯಿತ ಆಡಳಿತ ಇದ್ದರೂ ಟಾಸ್ಕ್ ಫೋರ್ಸ್ ಸಮಿತಿಯ ರಚನೆಯಾಗಲಿ, ಆಡಳಿತ ಮತ್ತು ವಿರೋಧ ಪಕ್ಷದ ಸರ್ವ ಸದಸ್ಯರ ಒಂದೇ ಒಂದು ಸಭೆಯನ್ನಾಗಲಿ ಕರೆದಿಲ್ಲ ಎಂದು ಮುನೀಶ್ ಅಲಿ ದೂರಿದ್ದಾರೆ.

ಪ್ರತೀ ಗ್ರಾಮದಲ್ಲಿ ಕೋವಿಡ್ ಟಾಸ್ಕ್ ಫೋರ್ಸ್ ಸಭೆ ನಡೆಸುತ್ತಿರುವ ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕ ರಾಜೇಶ್ ನಾಯ್ಕ್ ಅವರು ಕೂಡಾ ಪುರಸಭೆ ವ್ಯಾಪ್ತಿಯಲ್ಲಿ ಸದಸ್ಯರ ಮತ್ತು ಅಧಿಕಾರಿಗಳ ಸಭೆ ನಡೆಸಿ ಪ್ರಗತಿ ಪರಿಶೀಲನೆ ನಡೆಸದಿರುವುದು ಖೇದಕರವಾಗಿದೆ. ಕೋವಿಡ್ ಸಮಯದಲ್ಲಿ ಬಂಟ್ವಾಳ ತಾಲೂಕು ಸರಕಾರಿ ಆಸ್ಪತ್ರೆಗೆ ಹಲವು ಬಾರಿ ಭೇಟಿ ನೀಡುತ್ತಿರುವ ಶಾಸಕರು ಆಸ್ಪತ್ರೆಯ ಪಕ್ಕದಲ್ಲೇ ಇರುವ ಪುರಸಭೆಗೆ ಒಂದು ಬಾರಿಯೂ ಭೇಟಿ ನೀಡಿಲ್ಲ. ಅಲ್ಲದೆ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಯಾವುದೇ ಸಭೆ ಕರೆಯದ ಪುರಸಭೆಯ ಅಧಿಕಾರಿಗಳನ್ನು ಪ್ರಶ್ನೆ ಮಾಡುವ ಕೆಲಸವನ್ನೂ ಶಾಸಕರು ಮಾಡದಿರುವುದು ಹತ್ತು ಹಲವು ಕುತೂಹಲಗಳನ್ನು ಮೂಡಿಸಿದೆ ಎಂದು ಮುನೀಶ್ ಅಲಿ ತಿಳಿಸಿದ್ದಾರೆ.

ಪುರಸಭೆಯ ಆಡಳಿತ ಮತ್ತು ಅಧಿಕಾರಿಗಳ ನಡುವೆ ವಿಶ್ವಾಸದ ಕೊರತೆ ಇರುವುದು ಎದ್ದು ಕಾಣುತ್ತಿದೆ. ಪುರಸಭೆಯ ಆಡಳಿತಕ್ಕೆ ಪುರಸಭೆಯ ಯಾವುದೇ ಅಧಿಕಾರಿಗಳು ಮತ್ತು ಸಿಬ್ಬಂದಿಯ ಮೇಲೆ ನಿಯಂತ್ರಣ ಸಾಧ್ಯವಾಗುತ್ತಿಲ್ಲ‌. ಅಧಿಕಾರಿಗಳು ಅವರ ಇಷ್ಟದಂತೆ ಮತ್ತು ಮನಬಂದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಅಧಿಕಾರಿಗಳಿಗೆ ಸರ್ವಾಧಿಕಾರದ ಮನೋಭಾವ ಮೂಡಿದ್ದು ಪ್ರಶ್ನಿಸುವವರು ಯಾರೂ ಇಲ್ಲವಾಗಿದೆ. ಹಾಗಾಗಿ ಬಂಟ್ವಾಳ ಪುರಸಭೆಯ ಪರಿಸ್ಥಿತಿ ಅದೋಗತಿಗೆ ದೂಡಲ್ಪಟ್ಟಿದೆ. ಆದರೆ ಮಾರಕವಾದ ಸಾಂಕ್ರಾಮಿಕ ವೈರಸ್ ಜನರ ಜೀವವನ್ನು ಬಲಿ ಪಡೆಯುತ್ತಿರುವ ಸಂದರ್ಭದಲ್ಲಿ ಈ ರೀತಿಯ ಬೆಳವಣಿಗೆ ಸರಿಯಲ್ಲ. ಅಧಿಕಾರಿಗಳು ಮತ್ತು ಆಡಳಿತ ಪಕ್ಕದ ಬಿರುಕಿನಿಂದ ಜನಸಾಮಾನ್ಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರೂ ಅದ ಮಾಜಿ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಗಮನ ಹರಿಸಬೇಕು ಎಂದು ಮುನೀಶ್ ಅಲಿ ಆಗ್ರಹಿಸಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜಿಲ್ಲಾ ಮಟ್ಟದ ಎಲ್ಲಾ ಅಧಿಕಾರಿಗಳ ಕೋವಿಡ್ ಪ್ರಗತಿ ಪರಿಶೀಲನಾ ಸಭೆ ಕರೆದಾಗಳೆಲ್ಲಾ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ಮತ್ತು ಆರೋಗ್ಯಾಧಿಕಾರಿ ತಮ್ಮ ವ್ಯಾಪ್ತಿಯ ಪ್ರಗತಿ ಬಗ್ಗೆ ಜಿಲ್ಲಾಧಿಕಾರಿಗೆ ಏನು ಮಾಹಿತಿ ನೀಡುತ್ತಿದ್ದಾರೆ ಎಂಬ ಸಂಶಯ ಇದೆ.  ಜಿಲ್ಲಾಧಿಕಾರಿಯ ಸಭೆಯಲ್ಲಿ ಬಂಟ್ವಾಳ ಪುರಸಭೆ ವ್ಯಾಪ್ತಿಯ ಕೋವಿಡ್ ಪ್ರಗತಿಯ ಬಗ್ಗೆ ಪುರಸಭೆಯ ಅಧಿಕಾರಿಗಳು ನೀಡಿರುವ ಮಾಹಿತಿಯನ್ನು ಜಿಲ್ಲಾಧಿಕಾರಿ ಬಹಿರಂಗಪಡಿಸಬೇಕು ಎಂದು ಮುನೀಶ್ ಅಲಿ ಆಗ್ರಹಿಸಿದ್ದಾರೆ.

ಪುರಸಭಾ ವ್ಯಾಪ್ತಿಯಲ್ಲಿ ಕೊರೋನ ಪರಿಸ್ಥಿತಿ ಕೈ ಮೀರುತ್ತಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಬೇಕಾದ ಸಾಕಷ್ಟು ವ್ಯವಸ್ಥೆ ಪುರಸಭಾ ವ್ಯಾಪ್ತಿಯಲ್ಲಿ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿ ಅವರು ಕೂಡಲೇ ಬಂಟ್ವಾಳ ಪುರಸಭೆಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಪುರಸಭೆಯ ಸರ್ವ ಸದಸ್ಯರ ಸಭೆಯನ್ನು ಕರೆದು ಈವರೆಗಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆಯಬೇಕು. ಪುರಸಭೆಯ ಮುಖ್ಯಾಧಿಕಾರಿ, ಆರೋಗ್ಯಾಧಿಕಾರಿಗಳ ಜೊತೆ ಬಂಟ್ವಾಳ ತಹಶೀಲ್ದಾರ್ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಪುರಸಭಾ ವ್ಯಾಪ್ತಿಯಲ್ಲಿ ಕೊರೋನ ನಿಯಂತ್ರಣದ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಜಿಲ್ಲಾಧಿಕಾರಿ ಈ ಎಲ್ಲಾ ಅಧಿಕಾರಿಗಳ ಸಭೆ ಕರೆಯುವ ಮೂಲಕ ಅವರಿಗೆ ಚುರುಕು ಮುಟ್ಟಿಸುವ ಕೆಲಸ ಇನ್ನಾದರೂ ಮಾಡಿ ಅಧಿಕಾರಿಗಳನ್ನು ನಿದ್ದೆಯಿಂದ ಎಚ್ಚರಿಸಬೇಕು ಎಂದು ಮುನೀಶ್ ಅಲಿ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp