ಖಾಸಗೀಕರಣ ವಿರುದ್ಧ ಬ್ಯಾಂಕ್ ನೌಕರರಿಂದ ಸರಕಾರದ ವಿರುದ್ಧ ರಣಕಹಳೆ

Prasthutha|

ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಖಾಸಗೀಕರಣದ ವಿರುದ್ಧ ಮುಷ್ಕರ ಕೈಗೊಂಡಿರುವ ಬ್ಯಾಂಕ್ ನೌಕರರು ತಮ್ಮ ಆಕ್ರೋಶವನ್ನು ಮಂಗಳವಾರವೂ ಮುಂದುವರಿಸಿದ್ದು ಸರಕಾರದ ವಿರುದ್ಧ ರಹಕಹಳೆಯನ್ನು ಮೊಳಗಿಸಿದ್ದಾರೆ‌. 

ನಗರದ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮುಖ್ಯ ಕಚೇರಿ ಮುಂಭಾಗ ಸೇರಿದ ಬ್ಯಾಂಕ್ ನೌಕರರು, ಸರಕಾರವು ಬಂಡವಾಳಶಾಹಿಗಳಿಗೆ ದೇಶವನ್ನು ಮಾರಲು ಮುಂದಾಗಿದೆ ಎಂದು ಆರೋಪಿಸಿದ್ದಾರೆ. ದೇಶವನ್ನು, ಬ್ಯಾಂಕ್ ಗಳನ್ನು, ರೈತರನ್ನು, ಕಾರ್ಮಿಕರನ್ನು, ವಿದ್ಯಾರ್ಥಿಗಳನ್ನು ಉಳಿಸುವ ತುರ್ತು ಅವಶ್ಯಕತೆ ನಮ್ಮ ಮುಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬ್ಯಾಂಕ್ ಆಫ್ ಇಂಡಿಯಾ ಸಿಬ್ಬಂದಿ ಸರ್ವಮಂಗಳ ‘ಪ್ರಸ್ತುತ ನ್ಯೂಸ್’ ಜೊತೆಗೆ ಮಾತನಾಡುತ್ತಾ, ಖಾಸಗೀಕರಣ ಯಾವುದೇ ಕಾರಣಕ್ಕೂ ಜಾರಿಯಗಬಾರದು. ಯಾಕೆಂದರೆ, ಈಗಿನ ಯುವಜನತೆ ಬ್ಯಾಂಕ್ ನ್ನು ನಂಬಿ ಬಂದಿದ್ದಾರೆ‌. ಎಲ್ಲವನ್ನೂ ಖಾಸಗೀಕರಣ ಮಾಡಿದರೆ ಅವರ ಜೀವನದ ಪರಿಸ್ಥಿತಿ ಏನು? ಒಂದು ವೇಳೆ ಖಾಸಗೀಕರಣ ಮಾಡಿದ್ದೇ ಆದಲ್ಲಿ ದೇಶದಲ್ಲಿ ರೈತರು ಆತ್ಮಹತ್ಯೆ ಮಾಡಿದಂತೆಯೇ ನಮಗೂ ಆತ್ಮಹತ್ಯೆಯ ಸ್ಥಿತಿ ಬರಬಹುದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅವರು ಮಾತು ಮುಂದುವರಿಸುತ್ತಾ, ದೇಶದಲ್ಲಿ ಎಲ್ಲವನ್ನೂ ಖಾಸಗೀಕರಣ ಮಾಡಿದರೆ ಸರಕಾರಕ್ಕೇನು ಕೆಲಸ ಇಲ್ಲಿ? ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ. ಸರಕಾರದ ಈ ಧೋರಣೆ ಮುಂದುವರಿದೇ ಆದಲ್ಲಿ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ದೇಶದ ಜನತೆ ಮುಂದಾಗಬೇಕಾಗುತ್ತೆ ಮತ್ತು ತಮ್ಮನ್ನು ತಾವು ಉಳಿಸಿಕೊಳ್ಳಲು ಬೀದಿಗಿಳಿಯು ಸಮಯ ಬರುವುದಕ್ಕೆ ಸರಕಾರವೇ ಮುನ್ನುಡಿ ಹಾಕುತ್ತಿದೆ ಎಂದು ಹೇಳಿದ್ದಾರೆ.

ಇಂಡಿಯನ್‌ ಬ್ಯಾಂಕ್ ನೌಕರರ ಸಂಘಟನೆಯ ಪ್ರಧಾ‌ನ ಕಾರ್ಯದರ್ಶಿ ಚಂದ್ರಶೇಖರ್ ಮಾತನಾಡುತ್ತಾ, ರೈತರು, ಕಾರ್ಮಿಕರು, ದಮನಿತರು ಬೀದಿಗಿಳಿದಾಗ ಕೈಕಟ್ಟಿ ಕುಳಿತು ಸರಕಾರದ ಪರ ನಿಲುವು ತಾಳಿದ್ದ ಪ್ರತಿಯೊಬ್ಬರ ಕಾಲಬುಡಕ್ಕೆ ಇದೀಗ ಬೆಂಕಿ ಬಿದ್ದಿದೆ. ಹೋರಾಟದಿಂದ ಮಾತ್ರ ಈ ಸರಕಾರದ ಜನವಿರೋಧಿ ನೀತಿಯನ್ನು ಪ್ರತಿಭಟಿಸಲು ಸಾಧ್ಯ ಎಂದು ಹೇಳಿದರು.

- Advertisement -